Posts

ಏಕೆ ?

Image
ಮಂಜಿನರಮನೆಯ ಕಟ್ಟಿ ಅದರಂದ ಸವಿಯುವಾಗ ಸೂರ್ಯನೆದ್ದು ಬಂದನಲ್ಲ ! ಮಳೆ ನೀರ ಮೇಲೆ ಕಾಗದದ ದೋಣಿ ತೇಲಿಸುವಾಗ ನೀರೆ ಇಂಗಿ ಹೋಯಿತಲ್ಲ! ತೀರದ ಮರಳು ರಾಶಿಯಲಿ ಹೆಸರ ಕೊರೆದು ಬೀಗುವಾಗ ಸಾಗರದಲೆ ಚಿಮ್ಮಿ ಬಂದಿತಲ್ಲ! ಅಂಗೈಯಲ್ಲಿರುವ ಸ್ಫಟಿಕ ಸಿಕ್ಕಿತು ಎನ್ನುವಾಗ ಲೇ ಕೈಜಾರಿ ಹೋಯಿತಲ್ಲ !

ನಾನು

ಒಮ್ಮೊಮ್ಮೆ ನನಗೆ ಎಲ್ಲ ಯೋಚನೆಗಳು ಒಟ್ಟಿಗೆ ದಾಳಿ ಮಾಡುತ್ತವೆ. ಆಗ ನಾನು ನಾನಾಗಿರುವುದಿಲ್ಲ. ಎಲ್ಲೆಲ್ಲೊ ವಿಹರಿಸ್ತಾ ಇರ್ತೀನಿ. ಒಮ್ಮೆ ಕಲ್ಪನಾ ಲೋಕಕ್ಕೆ ಬಂದಿಳಿದರೆ ಅಲ್ಲಿಯೇ ಒಂದು ಸಾಮ್ರಾಜ್ಯವನ್ನೇ ಕಟ್ಟಿ ಬಿಡುತ್ತೇನೆ. ಚಿಕ್ಕವಳಿರುವಾಗ ಅಪ್ಪ ಹೇಳುತ್ತಿದ್ದ fantacy ಕಥೆಗಳನ್ನು ಕೇಳಿ ಕೇಳಿ ಕಲ್ಪನಾ ಸಾಮ್ರಾಜ್ಯವನ್ನು ಹೇಗೆ ಆಳುವುದು ಹಾಗು ಹೇಗೆ ವಿಸ್ತರಿಸುವುದು ಎಂಬುದನ್ನೂ ಕಲಿತುಕೊಂಡು ಬಿಟ್ಟಿದ್ದೀನಿ.ಹೀಗೆ ಯೋಚನೆಗಳು ಸಾಗಿ ಸಾಗಿ ಅಲ್ಲಿಯೇ ಒಂದು ಆಶಾಗೋಪುರ ಕಟ್ಟಿ ಅದರ ಮೇಲೇರಿ ಏರಿ ಏರಿ ಸಾಗುತ್ತಿರುವಾಗ ಸತ್ಯವೆಂಬುದು ಧುತ್ತೆಂದು ಕಣ್ಣ ಮುಂದೆ ಪ್ರತ್ಯಕ್ಷವಾಗಿ 'ನನ್ನನ್ನು ಒಪ್ಪಿಕೊ' ಎಂದು ಗೇಲಿ ಮಾಡಿ ನಕ್ಕಾಗ ಎಲ್ಲಿ ನಿಂತಿದ್ದೆನೋ ಅಲ್ಲಿಂದಲೇ ಧೊಪ್ಪೆಂದು ಕೆಳಗೆ ಬಿದ್ದು........ವಾಸ್ತವಕ್ಕೆ ಹೊಂದಿಕೊಳ್ಳಲೇ ಕಷ್ಟವಾಗಿ ಬಿಡತ್ತೆ. ಒಮ್ಮೊಮ್ಮೆ ಅನಿಸುವುದುಂಟು ನಾನು ಚಿಂತೆ ಎಂಬುದಕ್ಕೆ 'ವಿಚಾರ'ಎಂಬ ದೊಡ್ಡ ಹೆಸರು ಇಟ್ಟುಬಿಟ್ಟಿದ್ದಿನಿ ಅಂತ.ಈ ಭಾವನಜೀವಿಗಳ ಹಣೆಬರಹವೇ ಇಷ್ಟು ಅಂತ ಕಾಣುತ್ತೆ. ಭಾವನೆಗಳೇ ನಮ್ಮನ್ನು ಆಳುತ್ತವೆ. ಎಲ್ಲರ ಜೀವನದಲ್ಲೂ ಏಳು,ಬೀಳು,ಕಷ್ಟ ಸುಖ ಎಲ್ಲವೂ ಇದ್ದರೂ ಅದು ನಮ್ಮ ಸ್ವಂತ ಅನುಭವಕ್ಕೆ ಬಂದಾಗ ಅದು ಹೊಸದೇ. ಆಸೆಗಳಿಗೆ ಮಿತಿ ಇಲ್ಲ, ನಿರಾಶೆಗಳೂ ಕಡಿಮೆ ಇಲ್ಲ.

ಪಮ್ಮಿಗೊಂದು ಪತ್ರ

ಹಾಯ್ ಪಮ್ಮಿ, ನೋಡು, ಬ್ಲಾಗ್ನಲ್ಲಿ ನಿಂಗೆ ಪತ್ರ ಬರಿತ ಇದೀನಿ. ಕಾರ್ಡಿನಿಂದ ಶುರು ಆಗಿ ಈಗ ಬ್ಲಾಗಿಗೆ ಬಂದಿದೆ. ಅಷ್ಟರವರೆಗೂ ಉಳಿಸಿಕೊಂಡು ಬಂದಿದಿವಲ್ಲ ಸದ್ಯ . ಮೊನ್ನೆ ನಿನ್ನ ಮನೆಗೆ ಬಂದಾಗ ಯಾಕೋ ಮನಸ್ಸು ಸರಿ ಇರಲಿಲ್ಲ. ಗೊತ್ತಲ್ಲ ನಿಂಗೆ. ಆದ್ರೆ ನಿನ್ ಜೊತೆ ಮಲ್ಪೆ ಬೀಚಿಗೆ ಹೋಗಿ ಬಂದ್ಮೇಲೆ ಒಂದ್ ಸರ್ತಿ ಫ್ರೆಶ್ ಆಯ್ತು ನೋಡು. ಅದರಲ್ಲೂ ಗಾಡಿಯಲ್ಲಿ ಹೋಗಿದ್ದು ಮತ್ತು ಮಜಾ ಬಂತು. ಸದ್ಯ ನನ್ನನ್ನು ಸೇಫಾಗಿ ಕರ್ಕೊಂಡು ಬಂದ್ಯಲ್ಲ !! ಒಂದ್ ಮಾತಂತೂ ಹೇಳ್ಬೇಕು. ನಿಂದು ಭಾವಂದು ಜೋಡಿ "ಮೇಡ್ ಫಾರ್ ಈಚ್ ಅದರ್ " .ಎಷ್ಟು ಖುಷಿಯಾಯ್ತು ಗೊತ್ತ ನಂಗೆ ನಿಮ್ಮಿಬ್ರನ್ನು ನೋಡಿ. ಇಷ್ಟು ದಿನ ನಾನು ಸರಿಯಾಗಿ ಅಬ್ಸರ್ವ್ ಮಾಡಿರಲಿಲ್ಲ. ಸಂಬಂಧದಲೆಲ್ಲು ಕೃತಕತೆಯ ಲೇಪವಿಲ್ಲ, ಅತಿಯಾದ ನಿರೀಕ್ಷೆಗಳು ಇಲ್ಲ, ಅಹಂನ ದೊಂಬರಾಟವಿಲ್ಲ.. ಹಹ.. ನಂಗೊತ್ತು ನಿನೆಂತಿಯ ಅಂತ. ಇನ್ನು ಜಾಸ್ತಿ ಕೊರೆಯೋಲ್ಲ ಬಿಡು.... ಮೊದಲು ಬರೆಯುತಿದ್ದ ಹಾಗೆ ಬರೀಬೇಕು ಅಂದ್ರೆ, ಪವನ ಕೊಡಿಸಿದ ಚುಡಿ ಹೊಲೆಯೋಕೆ ಕೊಟ್ರು ಇನ್ನು ಸಿಕ್ಕಿಲ್ಲ, ನಮ್ಮ ಬೆಳಗಾಂ ಪ್ರೊಗ್ರಾಮ್ ಕ್ಯಾನ್ಸಲ್ ಆಯ್ತು, ೫ ನೆ ತಾರೀಕು ಕರಣ್ ನಿಗೆ ಶಾಲೆ ಶುರು, ಅತ್ತೆಗೆ ಕಾಲು ನೋವು ಜಾಸ್ತಿ ಆಗಿದೆ, ಮಾವನಿಗೆ ಬೆನ್ನು ನೋವು ಹೆಚ್ಚಾಗಿದೆ, ನಂಗೆ ಕೆಮ್ಮು ಸ್ವಲ್ಪ ಕಮ್ಮಿಯಾಗಿದೆ... ಒಳ್ಳೆ ಡಾಕ್ಟರ ಪ್ರಿಸ್ಸಿಪ್ಶನ್ ಇದ್ದ ಹಾಗೆ ಇದ್ಯಲ್ಲ !! ...

ಆ ದಿನಗಳು

ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ ಬರಿ ಮಾತು ಬರಿ ಮಾತು ಇನ್ಯಾಕೆ ಪ್ರೀತಿಯಲಿ ನೋಟವೊಂದೆ ಸಾಕು ದಿನವು ಬೆರೆಯಲೇ ಬೇಕು ಪ್ರೇಮಲೋಕದಾ ಗೀತೆ ಬರೆಯೋಣ ಬಾ ss [ಪ] ಬಾನಾಡಿ ಗೊಂದು ಸವಿಮಾತು ಕಲಿಸುವ ಆ ವೀಣೆಗೊಂದು ಎದೆರಾಗ ತಿಳಿಸುವ ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವಾ ಅರಳುತಿರೋ ಹೂಗಳಿಗೆ ಒಲವ ಸುಧೆ ಯಾ ಕೊಡುವ ಆವಾಗ ಬಾಳಿನಾ s ಅರ್ಥವೇ s ಪ್ರೇಮವೆಂಬುದಲವೆ s ಪ್ರೇಮವೇ ಇಲ್ಲದೆ ನಾನು ನೀನು ಯಾಕೆ ss [ ೧ ] ಆ ಮೋಡದಿಂದ ಮಳೆಹನಿಯು ಜಿನುಗುತಾ ಈ ಭೂಮಿಯಿಂದ ಅನುರಾಗ ಅರಳುತ ತಾರೆಯದು ಇಳಿಯುತಲಿ ಪ್ರೇಮವೆಂಬ ಕಿರಣ ಪಸರಿಸಿದೆ ಹೊಮ್ಮಿಸಿದೆ ಪ್ರೀತಿಯೆಂಬ ಕವನ ಆಕಾಶದಾಚೆಯಾ s ಲೋಕಕೇ s ಹಾರಿ ಹಾರಿ ಭ್ರಮಣ ಬಲ್ಲೆನು s ಅಲ್ಲಿಯೇ s ನನ್ನ ನಿನ್ನ ಮಿಲನಾ ss [ ೨ ]

ಮಂಥನ

ಅಂತು ಪವನನ ನಿಶ್ಚಿತಾರ್ಥ ಆಯಿತು. ಆದರು ಯಾಕೋ ಸಂತೋಷ ಅಂತ ಆಗ್ತಾ ಇಲ್ಲ. ಹುಡುಗಿ ನೋಡಿಕೊಂಡು ಬಂದ ದಿನವೇ ಪವನ ನನ್ನನ್ನು ಕೇಳಿದಾಗ ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಮನ ಗೊಂದಲದ ಗೂಡಾಗಿತ್ತು. ನನ್ನಿಂದ ಏನು ಉತ್ತರ ಬರದಾಗ ಅಮ್ಮನನ್ನು ಕೇಳಿದ. ಅವರು ಏನೋ ಹೇಳಿದರು, ಕಡೆಗೆ ತನ್ನ ನಿರ್ಧಾರ ಸಾರಿಬಿಟ್ಟ. ತಾನು ಅದೇ ಹುಡುಗಿಯನ್ನ ಮದ್ವೆ ಆಗ್ತೀನಿ ಅಂತ. ಕಡೆಗೆ ಅನ್ನಿಸಿತು ಹೌದು ಅ ಹುಡುಗಿ ಚೆನ್ನಾಗೆ ಇದ್ದಾಳಲ್ಲ,ಬೇಡ ಅನ್ನಲು ಯಾವ ಕಾರಣವೂ ಇರಲ್ಲಿಲ್ಲ. ನಾವೆಲ್ಲ ಸಮ್ಮತಿ ನೀಡಿದೆವು. ಮರುಕ್ಷಣವೇ ನನಗೇಕೋ ಬೇಜರಾಗಲು ಶುರುವಾಯ್ತು. ಪ್ರಸಾದ್ಗೆ ಹೇಳದೆ, 'ನಾನ್ಯಾಕೋ ಪವನನನ್ನು ಮಿಸ್ ಮಾಡಿಕೊಳ್ತಾ ಇದೀನಿ' ಅಂತ. ಅವರಂತೂ ನಕ್ಕುಬಿಟ್ಟರು,'ಯಾರತ್ರನಾದ್ರು ಹೀಗೆ ಹೇಳಿಬಿಟ್ಟೀಯಾ ಮತ್ತೆ, ತಮ್ಮನಿಗೆ ಮದ್ವೆ ಸೆಟ್ಟಾಯ್ತು ಅಂದ್ರೆ ಯಾರಾದ್ರೂ ಬೇಜಾರ್ ಮಡಿಕೊಳ್ತರಾ? ವಿಚಿತ್ರ ಮಾರಾಯ್ತಿ ' ಅಂತ.ನಂತರ ಏನೂ ಮಾತಾಡೋದಿಕ್ಕೆ ಹೋಗಲಿಲ್ಲ. ಅವರತ್ರ ಅಷ್ಟೆ ಅಲ್ಲ ಯಾರತ್ರನು. ನಾನೆಂದೂ ತಮ್ಮನಿಂದ ಏನೂ ನಿರೀಕ್ಷೆ ಮಾಡಲಿಲ್ಲ. ಕಷ್ಟ ,ಸುಖ ಹಂಚ್ಕೊಳ್ತಿದ್ದೆ ಅಷ್ಟೆ. ನನಗ್ಗೊತ್ತು, ಅವನಿಗೂ ಒಬ್ಬಳು ಆತ್ಮೀಯಳು ಬೇಕು, ಜೀವನ ಸಂಗಾತಿ ಬೇಕು ಅಂತ. ಈ ವಿವೇಚನೆ ಮೀರಿ ನಂಗೆ ಈ ತರಹ ಯೋಚಿಸೋದನ್ನ ತಡೆಯೋಕಗ್ತಿಲ್ಲ. ನಾನು ಬಹುಶ ಒಂಭತ್ತೋ ಅಥವ ಹತ್ತನೇ ಕ್ಲಾಸಲ್ಲಿದ್ದಾಗ ,ಶ್ರಿಧರಣ್ಣ ನನ್ನ ಜಾತಕ ನೋಡಿ ಹೇಳಿದ್ದ...

ಪಯಣ

ಜೀವನದ ಪಯಣದಿ ಸಾಗಿ ಸೋಲುತಿಹರೆಲ್ಲ ನಿಂತಲ್ಲೇ ನೆಲೆಯೂರುವಾಸೆ ಓ ಡುತಲೇ ಇದೆ ಕಾಲ. ಜಗವನೇ ಹಿಡಿದಿಡುವ ತವಕ ನಿಲ್ಲಲೊಲ್ಲದು ಸಮಯ ಯಾರ ಕೈಗೂ ನಿಲುಕದ ಈ ಕಾಲವೇ ವಿಸ್ಮಯ ಮನವೆಂಬ ಹುತ್ತದೊಳಗೆ ಹುಚ್ಚಾಸೆ ಗಳ ಮೊತ್ತ ಗುಣಿಸುತಲೇ ಹೋಗುವುದು ಅದೇನೋ ವಿಚಿತ್ರ ಕಾಲದೊಡನೆ ನಮ್ಮೆಲ್ಲರ ಗೆಲ್ಲಲಾಗದ ಓಟ ಜೀವವಿರುವವರೆಗೂ ಮುಗಿಯದು ಬದುಕಿನ ಜಂಜಾಟ ನಿತ್ಯ ಹೊಸಬೆಳಗು ನಿತ್ಯ ಹೊಸ ನಿರೀಕ್ಷೆ ನಿತ್ಯ ಹೊಂಗನಸುಗಳ ಸಾಕಾರದಾಪೇಕ್ಷೆ ಸಾಗರದಲೆಗಳಲಿ ಮಿಂದೆದ್ದು ಬಂದನಾ ಸೂರ್ಯ ಇದೋ ತಂದೆ ಹೊಸತೊಂದು ದಿನ ಹೊಸತೊಂದು ಪರ್ವ ಹಿಡಿಯಷ್ಟು ಜೀವನ ಅಂಗೈಲಿರುವಾಗ ಕ್ಷಣ ಕ್ಷಣ ಸವಿಯಲು ಆದಿಯೆನ್ತು ಅಂತ್ಯ ವೆಂತು ಮುಗಿಯದಲ್ಲ ಈ ಪಯಣ .

ಸುಪುತ್ರನ ಅಣಿಮುತ್ತುಗಳು

Image
ನೀವೆಂದಾದರೂ ಕನಸಿನಲೋಕ ಕಂಡಿದ್ದಿರಾ?ನಾನು ಕಂಡಿದ್ದೀನಿ. ನಾನಷ್ಟೇ ಅಲ್ಲ ನೀವೂ ಕಂಡಿದ್ದಿರಾ, ಆಶ್ಚರ್ಯ ಆಯ್ತಾ? ಎಲ್ಲರ ಕನಸಿನ ಲೋಕದ ಹೆಸರು ಒಂದೇ, ಅದುವೇ ಬಾಲ್ಯ. ಏನು ಎತ್ತ ಅಂತ ಅರ್ಥ ಆಗೋದರೊಳಗೆ ಕಳೆದ್ಹೋಗಿ ಬಿಟ್ಟಿರುತ್ತೆ. ನನ್ನ ಬಾಲ್ಯವಂತೂ ಕಳೆದ್ಹೋಗಿ ಬಿಟ್ಟಿದೆ. ಈಗ ನನ್ನ ಮಕ್ಕಳು ಆ ಅಮೂಲ್ಯವಾದ ಬಾಲ್ಯವನ್ನು ಅನುಭವಿಸ್ತಾ ಇದಾರೆ. ಅವರ ಆಟಗಳನ್ನು ನೋಡುವುದೇ ಒಂದು ಸಂತೋಷ. ಬಾಲಭಾಷೆ ಕೇಳುವುದಕ್ಕೆ ಚಂದ.ಅವರ ಮುಗ್ದ ಮಾತುಗಳನ್ನು ಬರವಣಿಗೆಯಲ್ಲಿ ರೆಕಾರ್ಡ್ ಮಾಡಿ ಇಡಬೇಕೆಂದು ಹೊರಟಿದ್ದೇನೆ. ಇದು ನನಗೋಸ್ಕರ ಅನ್ನುವದಕ್ಕಿಂತ ಅವರಿಗೋಸ್ಕರ ಬರೆಯುತ್ತಿದ್ದೇನೆ. so , dedicated to my beloved children karan and thanisha. ------------------------------------------------------------------------------------- ಕರಣ್: ಅಮ್ಮ ನಕ್ಷತ್ರಗಳೇಕೆ ಕೆಳಗೆ ಬಿಳುವುದಿಲ್ಲಮ್ಮ? ನಾನು(ಅಯ್ಯಬ್ಬ?) : ಅವೆಲ್ಲ ತುಂಬ ದೂರದಲ್ಲಿದೆ ಪುಟ್ಟ ಅವೆಲ್ಲ ಆಕಾಶದಲ್ಲಿ ಸುಮ್ಮನೆ ನಿಂತಿರ್ತಾವೆ . ಕರಣ್: ? ನಾನು: ಅವನ್ನೆಲ್ಲ ಫೆವಿಕಾಲ್ ಹಾಕಿ ಅಂಟಿಸಿರ್ತಾರೆ. ಕರಣ್ : ಯಾರು? ನಾನು: ದೇವರು. ಕರಣ್: ಹೌದಾ? ನಾನು:ಹೌದು.(ಸದ್ಯ ತೃಪ್ತಿ ಆಯ್ತಲ್ಲ!) ---------------------------------------------------------------------------------------- ಕರಣ್ :ಮಣ್ಣಿನಡಿ ಏನಿರುತ್ತೆ? ನಾನು: ಕಲ್ಲಿರುತ್ತೆ. ಕರಣ್: ...