ನೀವ್ ಏನ್ ಹೇಳ್ತೀರಾ ?

      ಇತ್ತೀಚಿಗೆ ಹೊಸ ವ್ಯಕ್ತಿಯೋರ್ವರ ಪರಿಚಯವಾಯ್ತು.  ಅವರು ಮುಂಬಯಿಯವರು. ಇಲ್ಲಿ ಅಂದರೆ ಕುಂದಾಪುರಕ್ಕೆ ಬಂದು ಎರಡು ವರ್ಷಗಳು ಸಂದಿವೆ ಅಂತೆ. ನನ್ನನ್ನು ಅವರ ಮನೆಗೆ ಆಹ್ವಾನಿಸಿದ್ದರಿಂದ ಅವರ ಮನೆಗೆ ಹೋಗಿದ್ದೆ. ಅವರ ಮನೆಯಲ್ಲಿ ಮಿನಿ ಮುಂಬೈ ದರ್ಶನವಾಯ್ತು. ಮಕ್ಕಳು ಹಿಂದಿಯಲ್ಲಿಯೇ ಮಾತನಾಡುತ್ತಿದ್ದರು. ನನ್ನ ಸೊ ಕಾಲ್ಡ್ ಗೆ ಗೆಳತಿ ಮಕ್ಕಳೊಡನೆ ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಮಾತಾಡುತ್ತಿದ್ದರು. ಕೆಲಸದ ಜನರು ಸಹಿತ ಹಿಂದಿಯೇ ಮಾತಾಡುತಿದ್ದರು! ನನಗೆ ಅಚ್ಚರಿಯಾಯಿತು. ನನಗೆ ತಿಳಿದ ಹಾಗೆ ಅವರು ಮೂಲತ ಕುಂದಾಪುರದವರೇ . ನಾನು ಮಕ್ಕಳಿಗೆ ಬಹುಶ ಕನ್ನಡ ಬರುವುದಿಲ್ಲ ಎಂದೆಣಿಸಿ ಹಿಂದಿಯಲ್ಲಿ ಮಾತಾಡಿಸಿದೆ. ಆಗ ನನ್ನ ಗೆಳತಿ ಹೇಳಿದರು " ಹೋಯ್ ,ಕನ್ನಡದಲ್ಲೇ ಮಾತಾಡ್ಸಿನಿ ಅಡ್ಡಿಲ್ಲ ಅವರಿಗೆ ಕನ್ನಡ ಬತ್ತ್ . ನಾ ಮತ್ತೆ  ಮಕ್ಕಳ ಇಲ್ಲಿಯವರ ಹಾಂಗೆ ಆಪುದ್ ಬ್ಯಾಡ ಅಂತ ಹಿಂದಿಯಾಗೆ ಮಾತಾಡ್ಸ್ತೆ . " ಅಂದರು!! ನಾನು ಮತ್ತೂ ಆಶ್ಚರ್ಯದಿಂದ ಕೇಳಿದೆ . "ಹಾಗಾದ್ರೆ ಮಕ್ಳು ಫ್ರೆಂಡ್ಸ್ ಜೊತೆ ಏನ್ ಮಾತಾಡ್ತಾರೆ?" ಅವರು ಅಷ್ಟೇ ಕೂಲಾಗಿ ಹೇಳಿದ್ರು . "ನಾನ್ ನನ್  ಮಕ್ಳ್ ನ್ನ  ಯಾರೊಟ್ಟಿಗೂ ಸೇರಸ್ತೆ ಇಲ್ಲೇ. ಹೊರಗೆ ಬಿಡ್ತೆ ಇಲ್ಲೆ. ಮನಿಯಾಗೆ T v ಇತ್ತ . lap top ಇತ್ತ್ . Time pass ಮಾಡ್ತೋ ." ನಾನು ಕನಿಕರದಿಂದ ಟೀವಿ ಯಲ್ಲಿ ಮುಳುಗಿದ್ದ ಚಿಕ್ಕ ಮಕ್ಕಳನ್ನು ನೋಡಿದೆ . ಆ ಮಕ್ಕಳು ಯಂತ್ರದೊಡನೆ ಯಂತ್ರವಾಗಿ ಬಿಟ್ಟಿದ್ದರು. 

                ಒಂದೇ ಮಾತಲ್ಲಿ ಹೇಳೋದಾದ್ರೆ ಅವರು ಎಲ್ಲವನ್ನೂ ಮುಂಬಯಿಕರಣಗೊಳಿಸಿಬಿಟ್ಟಿದ್ದರು. ಹಾಗೆ ಮಾಡುವುದರಿಂದ ಬಹುಶ ಅವರು  ಮುಂಬೈ ಯಲ್ಲಿ ಬದುಕುತ್ತಿದ್ದ ಹಾಗೆ ಭ್ರಮಿಸಿ ಕೊಳ್ಳುತ್ತಿರಬಹುದು . ನಾನು ಈ ತರದ ಬದುಕನ್ನು ಬೆಂಗಳೂರಿನಲ್ಲಿ ಕಂಡಿದ್ದೆ. ಅಲ್ಲಿ ಬಹಳಷ್ಟು ಜನ ಸ್ಥಳೀಯ ಜನರೊಡನೆ ಬೆರೆಯುವುದಿಲ್ಲ. ಅವರು ಅವರ lifestyle ಅನ್ನು ಅವರಿಗೆ ಬೇಕಾದ ಹಾಗೆ ಬದಲಾಯಿಸಿಕೊಂಡಿರುತ್ತಾರೆ. ಅದಕ್ಕೆಲ್ಲ ಸಮಾಜದ ಒಪ್ಪಿಗೆ ಬೇಕು ಅಂತ ಇರುವುದಿಲ್ಲ. ಅಲ್ಲಿ ನಿರ್ದಿಷ್ಟ ಕಲ್ಚರ್ ಅನ್ನೋದು ಇಲ್ಲ. ಆದರೆ ಕುಂದಾಪುರದಂತ ಚಿಕ್ಕ ಊರಲ್ಲಿ ದ್ವೀಪದಲ್ಲಿ  ಬದುಕಿದಂತೆ ಜೀವಿಸುವ ಜನಕ್ಕೆ ಏನನ್ನಬೇಕು? ಮನೆಯಲ್ಲಿ ಯಂತ್ರಗಳೊಡನೆ ಬೆಳೆಯುವ ಮಕ್ಕಳು ಸಂವಹನ ಕೌಶಲ್ಯ ಹೇಗೆ ಕಲಿಯುತ್ತವೆ? ಇತರರ ಜೊತೆ ವ್ಯವಹರಿಸುವುದನ್ನು ಹೇಗೆ ರೂಡಿಸಿಕೊಳ್ಳುತ್ತವೆ ? 

             ಸುಧಾ ಪತ್ರಿಕೆಯಲ್ಲಿ "ಎಲ್ಲಿಂದಲೋ ಬಂದವರು " ಎಂಬ ಮಾಲಿಕೆ ಇದೆ. ಅದರಲ್ಲಿ ಹೊರದೇಶಗಳಿಂದ ಬೆಂಗಳೂರಿಗೆ ಬಂದು ನೆಲೆಸಿದ ವಿದೇಶೀಯರ ಸಂದರ್ಶನವಿರುತ್ತದೆ. ಅದರಲ್ಲಿ ಎಲ್ಲ ವಿದೇಶೀಯರು ಸಾಮಾನ್ಯವಾಗಿ ಮೆಚ್ಚಿಕೊಳ್ಳುವ ಅಂಶ 'ಇಲ್ಲಿಯ ಜನರು ತುಂಬಾ ಸ್ನೇಹಜೀವಿ. ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಪ್ರಪಂಚದ ಮತ್ತೆಲ್ಲಿಯೂ ಇಷ್ಟು ಹೊಂದಿಕೊಳ್ಳುವುದಿಲ್ಲ. ಎಲ್ಲ ಅವರಷ್ಟಕ್ಕೆ ಅವರಿರುತ್ತಾರೆ ' ಎಂಬುದು . ಈಗ ಮಕ್ಕಳು ಬೆಳೆಯುವ ರೀತಿ ನೋಡಿದರೆ ಮುಂಬರುವ ದಿನಗಳಲ್ಲಿ ಆಗುವ ಬಹಳಷ್ಟು  ಬದಲಾವಣೆಗಳಿಗೆ ನಾವಿಗಲೇ ಸಿದ್ಧತೆ ಮಾಡಿಕೊಳ್ಳಬೇಕೇನೋ ?

Comments

  1. ನಿಮ್ಮ ಸಾಲುಗಳು ತುಂಬಾ ಅರ್ಥಪೂರ್ಣವಾಗಿದೆ ನಿಜ ಮನುಷ್ಯ ತನ್ನ ಭಾವನೆಗಳನ್ನು ಮರೆತು ಮೂಖ ಜಗತ್ತಿನತ್ತ ಮುಖ ಮಾಡುತ್ತಿದ್ದಾನೆ

    ReplyDelete

Post a Comment

Popular posts from this blog

ಅಮ್ಮ

ಸಂಕ್ರಮಣ

ಹಬ್ಬ ಹಬ್ಬ !!