ಹೀಗೊಂದು ಕಥೆ

ಒಂದೂರಿನಲ್ಲಿ ಒಂದು ಪುಟ್ಟ ಹುಡುಗಿ ಇದ್ದಳು. ಅವಳ ಹತ್ತಿರ ಅವಳಷ್ಟೇ ಪುಟ್ಟದಾದ ಒಂದು ಗೊಂಬೆ ಇತ್ತು. ಆ ಗೊಂಬೆ ಎಂದರೆ ಅವಳಿಗೆ ಪಂಚಪ್ರಾಣ.ಅದನ್ನು ಬಿಟ್ಟಿರಲಾರದಷ್ಟು ಪ್ರೀತಿ.ತಿನ್ನುವಾಗ, ಮಲಗುವಾಗ ಆಡಲು ಎಲ್ಲದಕ್ಕೂ ಅವಳಿಗೆ ಆ ಗೊಂಬೆ ಬೇಕೇ ಬೇಕು.ಎಲ್ಲೇ ಹೋದರು ಅದನ್ನು ತನ್ನ ಸಂಗಡ ಕರೆದೊಯ್ಯುತ್ತಿದ್ದಳು. ಹೀಗೆ ಒಮ್ಮೆ ಅಜ್ಜನ ಮನೆಗೆ ಹೋದಾಗ ಯಾರೋ ಆ ಗೊಂಬೆಯನ್ನು ಕದ್ದುಬಿಟ್ಟರು.ಹುಡುಗಿಯ ಸಂಕಟ ಹೇಳತೀರದು.ಯಾರು ಎಷ್ಟು ಸಮಾಧಾನಿಸಿದರೂ ಆ ಹುಡುಗಿ ತನಗೆ ಅದೇ ಗೊಂಬೆ ಬೇಕೆಂದು ರಚ್ಚೆ ಹಿಡಿಯುತ್ತಿದ್ದಳು. ದಿನಗಟ್ಟಳೆ ಅದನ್ನೆ ನೆನೆಯುತ್ತಾ ದುಖಃ ಸಾಗರದಲ್ಲಿ ಮುಳುಗಿದಳು..ಅವಳ ತಂದೆ ಒಂದಲ್ಲ ಎರಡಲ್ಲ ನಾಲ್ಕು ಗೊಂಬೆಗಳನ್ನು ತಂದು ಕೊಟ್ಟರೂ ಹುಡುಗಿಗೆ ತೃಪ್ತಿಯಾಗಲಿಲ್ಲ. ದಿನಗಳು ಕಳೆದರೂ ಹುಡುಗಿಗೆ ಅದರ ನೆನಪು ಮಾಸಲಿಲ್ಲ. ಹಾಗೆಯೆ ಪರಿಸ್ಥಿತಿಗೆ ಹೊಂದುಕೊಂಡಳು. ಆದರೂ ಮನದಲ್ಲಿ ಆ ಗೊಂಬೆಯನ್ನು ಕಳೆದುಕೊಂಡ ವೇದನೆ ಉಳಿದುಕೊಂಡಿತ್ತು.ಮೊದಲಿನ ಉತ್ಸಾಹ ಮಾಯವಾಗಿತ್ತು.ಒಮ್ಮೊಮ್ಮೆ ಅದರ ನೆನಪು ಉಕ್ಕಿ ಬಂದು ಅಳುತ್ತಾ ಕುಳಿತು ಬಿಡುವಳು.

ಹೀಗೆ ಒಂದು ವರ್ಷ ಕಳೆಯಿತು. ಅಚ್ಚರಿಯೆಂಬಂತೆ ಆ ಗೊಂಬೆ ಅವಳ ತಂದೆಗೆ ಮರಳಿ ಸಿಕ್ಕಿತು.ಅವರು ಅತೀವ ಆನಂದದಿಂದ ಮಗಳಿಗೆ ತಂದುಕೊಟ್ಟರು.ಆಗ ಆ ಹುಡುಗಿಯ ಸಂತಸ ಹೇಳತೀರದು.ಆ ಗೊಂಬೆ ಈಗ ಮೊದಲಿನಂತಿರದೆ ಬಣ್ಣ ಮಾಸಿತ್ತು. ಅಲಲ್ಲಿ ಹರಿದಿತ್ತು. ಆದರೂ ಹುಡುಗಿಗೆ ಗೊಂಬೆ ಸಿಕ್ಕ ಸಂತೋಷದಲ್ಲಿ ಅದ್ಯಾವುದೂ ಗಮನಕ್ಕೆ ಬಾರಲಿಲ್ಲ.ದಿವಸಗಳಿಂದ ಭಾರವಾದ ಆಕೆಯ ಮನ ಈಗ ಹಗುರಾಯಿತು.ಅಂದಿನಿಂದ ಅವಳು ಪುನಃ ಮೊದಲಿನಂತೆ ಖುಶಿಯಿಂದ ಇರತೊಡಗಿದಳು.ಮೊದಲಿನಂತೆ ಎಲ್ಲ ಕಡೆಗೂ ಅದನ್ನು ತೆಗೆದುಕೊಂಡು ಹೊಗುತ್ತಿದ್ದಳು.ಅವಳ ಗೆಳತಿಯರೆಲ್ಲಾ ಅವಳ ಹುಚ್ಚು ವ್ಯಾಮೊಹಕ್ಕೆ ಆಡಿಕೊಂಡು ನಗುತ್ತಿದ್ದರು.ಮೊದಮೊದಲು ಹುಡುಗಿಗೆ ಅವರ ಮೇಲೆ ಸಿಟ್ಟು ಬರುತಿತ್ತು. ನಂತರದ ದಿನಗಳಲ್ಲಿ ಅದನ್ನು ತೆಗೆದುಕೊಂಡು ಹೋಗುವುದನ್ನು ಬಿಟ್ಟಳು. ಆಡುವಾಗಲೂ ಹಾಗೆಯೆ, ಹೊಸ ಗೊಂಬೆಗಳೊಡನೆ ಆಡಿ ಆಡಿ ಅಭ್ಯಾಸವಾಗಿದ್ದುದರಿಂದ ಹಳೆಯ ಗೊಂಬೆಯನ್ನು ವೀಕ್ಷಕರ ಸ್ಥಾನದಲ್ಲಿ ಇಟ್ಟುಬಿಡುತ್ತಿದ್ದಳು.ಸ್ವಲ್ಪ ದಿನಗಳ ಬಳಿಕ ಹುಡುಗಿಗೆ ಆ ಗೊಂಬೆ ನಿಜಕ್ಕೂ ಹಳೆಯದೆನಿಸತೊಡಗಿತು.ಕ್ರಮೇಣ ಆ ಗೊಂಬೆ ಹುಡುಗಿಯ ಆಟಿಗೆಗಳ ಯಾದಿಯಿಂದ ನಿವೃತ್ತಿಗೊಂಡು ಮನೆಯಲ್ಲಿ ಎಲ್ಲೆಂದರಲ್ಲಿ ಬಿದ್ದುಕೊಂಡಿರುತಿತ್ತು. ಇದನ್ನು ಗಮನಿಸಿದ ಹುಡುಗಿಯ ತಾಯಿ ಒಂದು ದಿನ ಆ ಗೊಂಬೆಯನ್ನು ಭಿಕ್ಷುಕಿಯೊಬ್ಬಳಿಗೆ ಕೊಟ್ಟು ಬಿಟ್ಟಳು.ಇದು ಹುಡುಗಿಯ ಗಮನಕ್ಕೆ ಬಂದರೂ ಈ ಬಾರಿ ಆಕೆ ಅದರ ಬಗ್ಗೆ ತಲೆಯೇ ಕೆಡಿಸಿಕೊಳ್ಳಲಿಲ್ಲ!

Comments

Popular posts from this blog

ಅಮ್ಮ

ಸಂಕ್ರಮಣ

ಹಬ್ಬ ಹಬ್ಬ !!