Monday, March 21, 2011

ಬಾಗಿಲುಗಳು

ಈಗ ಹೊಸಮನೆ ಕಟ್ಟೋ ಧಾವಂತ.ರಸ್ತೆ ಅಗಲೀಕರಣದಿಂದಾಗಿ  ಎಂದೋ 
ಕಟ್ಟಬೇಕಿದ್ದ ಮನೆ ಈಗಲೇ ಕಟ್ಟಬೇಕಾಗಿದೆ.ಮನೆ ಪ್ಲ್ಯಾನು, ಮರ,ಮನೆ ಸಾಲ ಇತ್ಯಾದಿಗಳಲ್ಲಿ ಮುಳುಗಿಹೋಗುವ (!!) ಸಮಯ! ಮನೆ ಎಷ್ಟು ದೊಡ್ಡದಿರಬೇಕು,ಕೋಣೆಗಳೆಷ್ಟಿರಬೇಕು, ಕಿಟಕಿಗಳೆಷ್ಟಿರಬೇಕು, ಹೇಗಿರಬೇಕು,ಬಾಗಿಲುಗಳೆಷ್ಟು ಬೇಕು? ಇತ್ಯಾದಿಗಳ ಚರ್ಚೆ. ಬಾಗಿಲಿಗೆ ಲಕ್ಷ್ಮಿ ಚಿತ್ರ ಕೆತ್ತಿಸಬೇಕೆಂದು ಎಲ್ಲರ ಅಭಿಪ್ರಾಯ. ಇರಲಿ. ಯಾವುದೋ ಒಂದು. ಅದರ ಕೆಲಸ ಅದು ಮಾಡಿದರಾಯ್ತು. ಅಂದರೆ? ಮನೆ ಜನರನ್ನು ಕಾಯುವ ಕೆಲಸ, ನಗನಾಣ್ಯಗಳನ್ನು ಕಾಯುವ ಕೆಲಸ, ಮತ್ತೆ? ಮತ್ತೇನು ಮಾಡುತ್ತೆ ಅದು? ಮನೆ ಜನರನ್ನು ಇತರ ಜನರಿಂದ ಬೇರ್ಪಡಿಸುವ ಕೆಲಸ!? ಮನೆಯೊಳಗಿನ ವಿಚಾರಗಳನ್ನು ಮನೆಯಲ್ಲಿಯೇ ಹೂತು ಹಾಕುವ ಕೆಲಸ. ಮತ್ತಿನ್ನೆಷ್ಟೋ? ಬಾಗಿಲಿನೀಚೆಯ ವಿಚಾರಗಳು ಈಚೆಗೆ ಬಾಗಿಲಿನಾಚೆಯ ವಿಷಯಗಳು ಆಚೆಗೆ.ಅಬ್ಬ! ಬರಿ ಒಂದು ಹಲಗೆಗೆ ಮನೆ ಹಾಗು ಹೊರಗಿನ ಪ್ರಪಂಚಕ್ಕೆ ಇಷ್ಟೊಂದು ಅಂತರವನ್ನು ಸೃಷ್ಟಿ ಮಾಡುವ ಶಕ್ತಿ!   
        ಇತ್ತೀಚಿಗೆ ಕೆಲವರು ಕೇಳಿದರು,ನೀವ್ಯಾಕೆ ಇತ್ತೀಚಿಗೆ ಏನೂ ಬರಿತ ಇಲ್ಲ? ಅಂತ. ಉತ್ತರ ಹೇಳಲು ತಡಬಡಿಸಿದೆ. ಏಕೆಂದರೆ ಈ ಪ್ರಶ್ನೆ ಉತ್ತರಿಸಬೇಕೆಂದರೆ ಮೊದಲು ನಾನೇಕೆ ಬರಿತ ಇದ್ದೆ ಅನ್ನೋದು ಗೊತ್ತಿರಬೇಕು! ಬಹುಶಃ ನಾನೆಂದೂ ಬೇರೆಯವರು ಓದಲಿ ಎಂದು ಬರಿಲೆ ಇಲ್ಲ. ಹಾಗೆನಾದ್ರು ಇದ್ದಿದ್ರೆ ನಾನೇಕೆ ಬರಿತಾ ಇಲ್ಲ ಎಂಬ ಪ್ರಶ್ನೆ ನಿರೀಕ್ಷಿತವಾಗಿದ್ದು ಅದಕ್ಕೆ ಸೂಕ್ತ ಉತ್ತರ ರೆಡಿ ಮಾಡಿತ್ತುಕೊಳ್ತಾ ಇದ್ದೆ . ನಾನ್ಯಾಕೆ ಬರಿತ ಇದ್ದೆ? ಅದು ಇರಲಿ,  ನಾನ್ಯಾಕೆ ಬರೀಬೇಕು? ಈಗ ಯಾಕೆ ಬರಿತ ಇಲ್ಲ? ಮುಂದೆ ಬರಿಬೇಕ ಬೇಡವಾ ಎಂಬೋದೆ ನನಗೆ ಸ್ಪಷ್ಟವಾಗಿಲ್ಲ. ಬಹುಶಃ ನಾನು ನನಗೋಸ್ಕರ ಬರಿತಾ ಇದ್ದೆ ಹಾಗು ನನಗಾಗಿಯ ಬಿಟ್ಟು ಬಿಟ್ಟೆ. ಯಾಕೆ ಬರಿತ ಇದ್ದೆ? ಮನದೊಳಗಿನ ಮಾತುಗಳನ್ನು ಹೊರಬಿಡಲು, ಮನೆಯೊಳಗಿನ ವಿಷಯಗಳನ್ನು ಹೊರಗೆಳೆಯಲು, ಮನೆಯ ಹೊರಗಿನ ವಿಚಾರಗಳನ್ನು ಮನೆಯ ಪರಿಧಿಯೊಳಗೆ ಎಳೆದು ತರಲು? ಯಾವುದೋ ಒಂದು ಅಥವ ಎಲ್ಲಾನು ಹೌದೋ? ಎಲ್ಲಕ್ಕಿಂತ ಮುಖ್ಯವಾಗಿ ಬಾಗಿಲು ಮುಚ್ಚಿಕೊಂಡೆ ಸಾರಾಗವಾಗಿ ಉಸಿರಾಡಲು!!  ಬಹುಶಃ ಮುಚ್ಚಿದ ಬಾಗಿಲೆ ನನ್ನನ್ನು ಬರೆಯುವಂತೆ ಪ್ರೇರೇಪಿಸಿರಬೇಕು. ಹಲವರಿರುತ್ತಾರೆ ಅವರ ಮನೆಯ ಬಾಗಿಲಷ್ಟೇ ಅಲ್ಲ ಮನದ ಬಾಗಿಲು ಕೂಡ ಮುಚ್ಚಿಬಿಟ್ಟಿರುತ್ತಾರೆ. ಅಲ್ಲಿ ಹೊಸತನಕ್ಕೆ ಅವಕಾಶವಿಲ್ಲ,ಹೊಸ ಜನರಿಗೆ ಜಾಗವಿಲ್ಲ , ಹೊಸ ವಿಚಾರಗಳಿಗೆ ಸ್ವಾಗತವಿಲ್ಲ!                     
              ಈಗ ಚೆಂದದ ಬಾಗಿಲು ಮಾಡಿಸಿದರೆ ಅದನ್ನು ಮುಚ್ಚಿಟ್ಟರೆ ತಾನೇ ಅದರ ಚೆಂದ ಕಾಣೋದು? ಮನದ ಬಾಗಿಲು ಕೂಡ ಮುಚ್ಚಿಟ್ಟರೆ ಮಾತ್ರ ಚೆಂದ. ಎಲ್ಲವನ್ನು ಎಲ್ಲರಲ್ಲಿಯೂ ತೆರೆದುಕೊಂಡು ಬಿಟ್ಟರೆ ಬೆಲೆ ಇರೋಲ್ವಂತೆ! ಹಾಗಂತ ಯಾರ್ಯಾರ ಬಳಿ ಯಾವ ಯಾವ ಕದ ಮುಚ್ಚಿಡಬೇಕು, ಯಾವ ಕದ ತೆರೆಯಬೇಕು ಅನ್ನೋದು ತಿಳಿದಿರಬೇಕು! ಹಾಗಂತ ನನ್ನ ತಂದೆ ನನ್ನ ತಾಯಿಗೆ ಹೇಳ್ತಾ ಇದ್ದರು. ಈಗ ನನಗೆ ನನ್ನ ಪತಿದೇವರು ಹೇಳ್ತಾರೆ! ಈಗೀಗ ಮನೆಯ ಬಾಗಿಲುಗಳು ಮುಚ್ಚಿಕೊಂಡೆ ಇರುತ್ತವೆ. ಹಗಲಿಗೆ ಧೂಳು ಬರುತ್ತೆ ಅಂತ, ರಾತ್ರಿ ಕಳ್ಳರು ಬರುತ್ತಾರಂತ! ಮನೆ ಗುಡಿಸಿ ಒರೆಸಿದರೆ ಎಷ್ಟೇ ಧೂಳಾದ್ರೂ ಮನೆ ಲಕಲಕ.  ಆದ್ರೆ ಮನದ ಬಾಗಿಲು ಯಾಕೆ ಮುಚ್ಚಿಕೊಂಡಿರಬೇಕು?  ಗುಡಿಸಿ ಒರೆಸಲು ಕಷ್ಟವೆಂದೇ?  ಒಮ್ಮೆ ಯಾರನ್ನಾದರು ಒಳ ಕರೆದು ಮನಸ್ಸಿನಲ್ಲಿ ಕೂರಿಸಿಕೊಂಡು ಬಿಟ್ಟರೆ ಮುಗೀತು, ಅದು ಶಾಶ್ವತ ಸ್ಥಾನ. ಮೊನ್ನೆ ಪರಿಚಿತರೋರ್ವರು ಹೇಳುತ್ತಾ ಇದ್ದರು. 'ನಾನು ಮನೆಯಾಕೆ ಕದ ಹಾಕಿಕೊಂಡ ನಂತರವೇ ಹೊರಡೋದು, ಕಾಲ ಕೆಟ್ಟು ಹೋಗಿದೆ ನೋಡಿ ಅಂತ! '  ಅನ್ಯರು ಬಾಗಿಲು ತಟ್ಟಿದರೆ ಎಂಬ ಭಯವೇ? ಬಾಗಿಲು ತಟ್ಟಿದವರು ಮನೆಯೋಡತಿಯ ಮನದ ಬಾಗಿಲೂ ತಟ್ಟಿದರೆ!  ಎಂಬ ಆತಂಕವೇ ಎಂಬುದು ಸ್ಪಷ್ಟವಾಗಲಿಲ್ಲ. ಕೆಲಸಕ್ಕೆ ಹೋಗುವ ಗೆಳತಿಯೋರ್ವಳು ಹೇಳ್ತಾ ಇದ್ದದ್ದು, 'ನಾನು ಮನೇಲಿರುವಾಗ ಬೇರೇನೆ, ಹೊರಗಿರುವಾಗ ಬೇರೇನೆ '  ಅದ್ಹೇಗೆ ಸಾಧ್ಯ? ಸ್ವಾತಂತ್ರ್ಯ, ಪಾರತಂತ್ರ್ಯದ ಅನುಭವವೇ? ಅಥವ ಸಮಯಕ್ಕೆ ಸರಿಯಾದ ಮುಖವಾಡಗಳೇ? ಬಹುಶಃ ಕದ ಮುಚ್ಚುವುದು ತೆರೆಯುವುದು ಅಂದರೆ ಹೀಗೆಯೇ ಅನ್ನಿಸುತ್ತೆ.               '
            'ಅಡುಗೆ ಮನೆಗೆ ಬಾಗಿಲು ಬೇಕೇ ಬೇಕು'  ನಾನೆಂದೆ. ' ಈಗೆಲ್ಲ ಓಪನ್ ಕಿಚನ್ ಇರೋದೇ ಟ್ರೆಂಡ್ ' ಅಂದರು. 'ಆದರೆ ಅಡುಗೆ ಮಾಡುವಾಗ ಎಷ್ಟು ಕೊಳೆಯಾಗಿರುತ್ತೆ, ಸಾಮಾನು ಎಲ್ಲೆಂದರಲ್ಲಿ ಇರುತ್ತೆ.ಯಾರಾದ್ರು ಬಂದರೆ ಎಲ್ಲ ಕಾಣುತ್ತೆ ' ಎಂದೆ.  ಕುರೂಪವನ್ನು ಮರೆಮಾಚುವ ಪ್ರಯತ್ನ. ಎಲ್ಲರ ಮನದ ಬಾಗಿಲು ತೆರೆದರೆ ಅಡುಗೆಮನೆಗಿಂತಲೂ ಹೆಚ್ಚಿನ ಕುರೂಪತೆ ಇರಬಹುದು. ಅದಕ್ಕೆ ಮುಚ್ಚಿದ ಬಾಗಿಲೆ ಚೆಂದ.