Monday, May 31, 2010

ಅಂದು ಇಂದು

ಅಂದು ಮುಂಜಾನೆದ್ದು ದೇವರ ಸ್ಮರಣೆ 
ಇಂದು ಟೈಮಿಲ್ಲ ಸ್ವಾಮಿ ಎಲ್ಲಾ ಆಫೀಸಿನ ಕೆಲಸದ ಮಹಿಮೆ!!
ಅಂದು ಒಳಕರೆದು ಕೂರಿಸಿ ಸತ್ಕಾರ 
ಇಂದು ಕಿಟಕಿಯಿಂದಲೇ ಕೇಳ್ತಾರೆ ಸ್ವಾಮಿ ಏನ್ಸಮಾಚಾರ!!?

ಹಬ್ಬ ಹಬ್ಬ !!

ಮೂಡಣದಲಿ ಬೆಳಕು ಮೂಡುತ್ತಲೇ 
ಅಂಗೈಯಲ್ಲಿ ದೇವರ ಕಂಡು 
ಪತಿಯ ಕಾಲಿಗೆ ನಮಿಸಿದರೆ 
ಆರಂಭವಾಯಿತು ಶುಭ ದಿನ 

ಕೈ ಬಳೆಯ ನಾದದೊಂದಿಗೆ 
ಬೆಸೆವ ಕಾಲ್ಗೆಜ್ಜೆಯ ನಿನಾದ 
ಅದರೊಂದಿಗೆ ಸ್ಫರ್ಧಿಸುವ 
ಮುದ್ದು ಚಿಣ್ಣರ ರಾಗ 

ಹಬ್ಬದಡುಗೆಗೆ ಪಾಕಶಾಲೆಯಲಿ 
ವಿವಿಧ ಪಾತ್ರೆಗಳ ಮೇಳ 
ಜೊತೆಗೆ ಹೊರಟಿದೆ ರೊಟ್ಟಿ 
ಬಡಿಯುವ ತಾಳ 

ಮನೆಯಂಗಳದಿ ಧ್ವನಿಸಿದೆ 
ಮಕ್ಕಳ ಗೌಜು 
ನಾನೇನು ಕಡಿಮೆ ಎನುತಿದೆ 
ಮನೆಯ ಚಿನ್ನಾಟದ ಕರು 

ಅತಿಥಿಗಳು ಬರುವರೇ 
ಅದೇನು ಸಡಗರ 
ಕಳೆಗಟ್ಟಿತು ಮನೆಯಲ್ಲಿ 
ಹಬ್ಬದ ವಾತಾವರಣ 

ದೇವರಿಗೆ ಧೂಪದಾರತಿಯ ಪೂಜೆ 
ಕೇರಿಯಲೆಲ್ಲ ಘಂಟಾ ನಿನಾದ 
ಹಿರಿಯರ ಕಾಲಿಗೆ ನಮಿಸಿ 
ಅತಿಥಿಗಳಿಗೆ ಉಡುಗೊರೆಯ ಸತ್ಕಾರ 

ಘಮಘಮಿಸುವ ಮೃಷ್ಟಾನ್ನ 
ಪಂಕ್ತಿಯಲ್ಲಿ ಸಹಭೊಜನ 
ಸಂತೃಪ್ತಿಯಿಂದ ಬೀಗುವಳು ಮನೆಯೊಡತಿ 
ಇರಬಾರದೇ ಹೀಗೆಯೇ ಪ್ರತಿದಿನ !!

ಅಬ್ಬಾ ಹಬ್ಬ !!

ಮೊಬೈಲ್ ಎಂಬ ಕೋಳಿ ಕೂಗಿದೊಡನೆ
ಬಾಸನ್ನು ನೆನೆಯುತ ಎಂದಿನಂತೆ ಎದ್ದಾಗ
ಸೆಲ್ ನ ರಿಮೈಂಡರ್ ಎಂಬ ಕಿರುಬ
ಅರಚುವಾಗ ನೆನಪಾಯ್ತು  ಅಂದು ಹಬ್ಬವೆಂದು!!

ಮನದಲ್ಲಿ ತುಂಬಿತು ಹರ್ಷದ ಹೊನಲು
ಮಿಡ್ ವೀಕಲ್ಲಿ ಹಾಲಿಡೆಯೆಂದು
ಚಕಚಕನೆ ಓಡಿತು ಮೆದುಳಲ್ಲಿ ಲಿಸ್ಟು
ವೀಕೆಂಡ್ ಕಾದಿದ್ದ ಪೆಂಡಿಂಗ್ ವರ್ಕು

ಮಕ್ಕಳು ಕುಣಿದರು ಸಂತೋಷದಲ್ಲಿ
ಈವನಿಂಗ್ ನಲ್ಲಿ ಔಟಿಂಗ್ ಎಂದು
ಹತ್ತಿಕೊಂಡಿತು ಚಿಂತೆ ಡಿನ್ನರ್
ಮ್ಯಾಕ್ ಡೊನಲ್ಡ್ ನಲ್ಲೊ ಪಿಝಾ ಹಟ್ಟಲ್ಲೊ!

ಈಗ ಇರೊದೆ ತುಂಬ ಇಂಪಾರ್ಟೆಂಟ್ ವರ್ಕು
ಗೆಳೆಯರಿಗೆ ಕಳಿಸುವ ಕಂಪ್ಯೂಟರ್ 'ಮೇಲ್ ' ವಿಶ್ಶು !
ಮೇಲ್ ಬಾಕ್ಸ್ ತುಂಬಿತು ರಿಪ್ಲಾಯ್ಗಳಿಂದ
ಓದಿ ಅಳಿಸಿಯೂ ಆಯ್ತು ಅಂದೆ ಅಲ್ಲಿಂದ

ಮನೆಯೊಡತಿ ಹಚ್ಚಿಕೊಂಡಳು ಮನೆಯ ಕ್ಲೀನಿಂಗು
ಯಜಮಾನನಿಗೆ ಆಫೀಸಿನ ಕೆಲಸದ ಬರ್ಡನ್ನು
ಟಿವಿಯ ಮುಂದೆ ಮಕ್ಕಳ ಸೆಲೆಬ್ರೇಷನ್ನು
ಇನ್ಯಾಕೆ ಮನೆಯೊಡತಿಗೆ ಹಬ್ಬದ ಟೆನ್ಶನ್ನು!!

ಅತಿಥಿಗಳು ಬಂದರೆ (!! ) ಕಳಿಸುವ ಗಡಿಬಿಡಿ
ವಿಧ ವಿಧ ತಿನಿಸುಗಳಿಗೆ ಇದೆಯಲ್ಲ ಬೇಕರಿ!
ದೇಗುಲಕೆ ಹೊಗುವುದು ಬಾಕಿ ಇದೆಯಲ್ಲ
ದೈವ ಭಕುತಿಯನು ’ತೋರಿಸ’ಬೇಕಲ್ಲ!

ಮಾಲು ಫೋರಂ ಎಂದು ತಿರುತಿರುಗಿ ಶಾಪಿಂಗು
ಸುಸ್ತಾದಾಗ ಇದೆಯಲ್ಲ ಜಂಕ್ಸು ಕೋಲ್ಡ್ರಿಂಕ್ಸು!
ಕಾಂಕ್ರೀಟ್ ಕಾಡಿನ ಮಧ್ಯೆ ಮಕ್ಕಳ ಗಮ್ಮತ್ತು
ಕಂಡಿದೆ ಕೊಳ್ಳುಬಾಕ ಸಂಸ್ಕೃತಿಯಲ್ಲೇ ಜಗತ್ತು

ಯಾವ ಹಬ್ಬವಾದರು ವ್ಯತ್ಯಾಸವೆಂತು
ಅದು ಹಾಲಿಡೇ ಎಂಬುದೆ ಇಂಪಾರ್ಟೆಂಟು
ಗಡಿಬಿಡಿ ಒತ್ತಡದ  ನಡುವೆ ಒಂದು ಬಾರಿ
ಹಾಯಾಗಿ ಕಾಲು ಚಾಚಿ ಮಲಗಿದರೆ ಸಂತೃಪ್ತಿ !!