Monday, May 31, 2010

ಅಂದು ಇಂದು

ಅಂದು ಮುಂಜಾನೆದ್ದು ದೇವರ ಸ್ಮರಣೆ 
ಇಂದು ಟೈಮಿಲ್ಲ ಸ್ವಾಮಿ ಎಲ್ಲಾ ಆಫೀಸಿನ ಕೆಲಸದ ಮಹಿಮೆ!!
ಅಂದು ಒಳಕರೆದು ಕೂರಿಸಿ ಸತ್ಕಾರ 
ಇಂದು ಕಿಟಕಿಯಿಂದಲೇ ಕೇಳ್ತಾರೆ ಸ್ವಾಮಿ ಏನ್ಸಮಾಚಾರ!!?

ಹಬ್ಬ ಹಬ್ಬ !!

ಮೂಡಣದಲಿ ಬೆಳಕು ಮೂಡುತ್ತಲೇ 
ಅಂಗೈಯಲ್ಲಿ ದೇವರ ಕಂಡು 
ಪತಿಯ ಕಾಲಿಗೆ ನಮಿಸಿದರೆ 
ಆರಂಭವಾಯಿತು ಶುಭ ದಿನ 

ಕೈ ಬಳೆಯ ನಾದದೊಂದಿಗೆ 
ಬೆಸೆವ ಕಾಲ್ಗೆಜ್ಜೆಯ ನಿನಾದ 
ಅದರೊಂದಿಗೆ ಸ್ಫರ್ಧಿಸುವ 
ಮುದ್ದು ಚಿಣ್ಣರ ರಾಗ 

ಹಬ್ಬದಡುಗೆಗೆ ಪಾಕಶಾಲೆಯಲಿ 
ವಿವಿಧ ಪಾತ್ರೆಗಳ ಮೇಳ 
ಜೊತೆಗೆ ಹೊರಟಿದೆ ರೊಟ್ಟಿ 
ಬಡಿಯುವ ತಾಳ 

ಮನೆಯಂಗಳದಿ ಧ್ವನಿಸಿದೆ 
ಮಕ್ಕಳ ಗೌಜು 
ನಾನೇನು ಕಡಿಮೆ ಎನುತಿದೆ 
ಮನೆಯ ಚಿನ್ನಾಟದ ಕರು 

ಅತಿಥಿಗಳು ಬರುವರೇ 
ಅದೇನು ಸಡಗರ 
ಕಳೆಗಟ್ಟಿತು ಮನೆಯಲ್ಲಿ 
ಹಬ್ಬದ ವಾತಾವರಣ 

ದೇವರಿಗೆ ಧೂಪದಾರತಿಯ ಪೂಜೆ 
ಕೇರಿಯಲೆಲ್ಲ ಘಂಟಾ ನಿನಾದ 
ಹಿರಿಯರ ಕಾಲಿಗೆ ನಮಿಸಿ 
ಅತಿಥಿಗಳಿಗೆ ಉಡುಗೊರೆಯ ಸತ್ಕಾರ 

ಘಮಘಮಿಸುವ ಮೃಷ್ಟಾನ್ನ 
ಪಂಕ್ತಿಯಲ್ಲಿ ಸಹಭೊಜನ 
ಸಂತೃಪ್ತಿಯಿಂದ ಬೀಗುವಳು ಮನೆಯೊಡತಿ 
ಇರಬಾರದೇ ಹೀಗೆಯೇ ಪ್ರತಿದಿನ !!

ಅಬ್ಬಾ ಹಬ್ಬ !!

ಮೊಬೈಲ್ ಎಂಬ ಕೋಳಿ ಕೂಗಿದೊಡನೆ
ಬಾಸನ್ನು ನೆನೆಯುತ ಎಂದಿನಂತೆ ಎದ್ದಾಗ
ಸೆಲ್ ನ ರಿಮೈಂಡರ್ ಎಂಬ ಕಿರುಬ
ಅರಚುವಾಗ ನೆನಪಾಯ್ತು  ಅಂದು ಹಬ್ಬವೆಂದು!!

ಮನದಲ್ಲಿ ತುಂಬಿತು ಹರ್ಷದ ಹೊನಲು
ಮಿಡ್ ವೀಕಲ್ಲಿ ಹಾಲಿಡೆಯೆಂದು
ಚಕಚಕನೆ ಓಡಿತು ಮೆದುಳಲ್ಲಿ ಲಿಸ್ಟು
ವೀಕೆಂಡ್ ಕಾದಿದ್ದ ಪೆಂಡಿಂಗ್ ವರ್ಕು

ಮಕ್ಕಳು ಕುಣಿದರು ಸಂತೋಷದಲ್ಲಿ
ಈವನಿಂಗ್ ನಲ್ಲಿ ಔಟಿಂಗ್ ಎಂದು
ಹತ್ತಿಕೊಂಡಿತು ಚಿಂತೆ ಡಿನ್ನರ್
ಮ್ಯಾಕ್ ಡೊನಲ್ಡ್ ನಲ್ಲೊ ಪಿಝಾ ಹಟ್ಟಲ್ಲೊ!

ಈಗ ಇರೊದೆ ತುಂಬ ಇಂಪಾರ್ಟೆಂಟ್ ವರ್ಕು
ಗೆಳೆಯರಿಗೆ ಕಳಿಸುವ ಕಂಪ್ಯೂಟರ್ 'ಮೇಲ್ ' ವಿಶ್ಶು !
ಮೇಲ್ ಬಾಕ್ಸ್ ತುಂಬಿತು ರಿಪ್ಲಾಯ್ಗಳಿಂದ
ಓದಿ ಅಳಿಸಿಯೂ ಆಯ್ತು ಅಂದೆ ಅಲ್ಲಿಂದ

ಮನೆಯೊಡತಿ ಹಚ್ಚಿಕೊಂಡಳು ಮನೆಯ ಕ್ಲೀನಿಂಗು
ಯಜಮಾನನಿಗೆ ಆಫೀಸಿನ ಕೆಲಸದ ಬರ್ಡನ್ನು
ಟಿವಿಯ ಮುಂದೆ ಮಕ್ಕಳ ಸೆಲೆಬ್ರೇಷನ್ನು
ಇನ್ಯಾಕೆ ಮನೆಯೊಡತಿಗೆ ಹಬ್ಬದ ಟೆನ್ಶನ್ನು!!

ಅತಿಥಿಗಳು ಬಂದರೆ (!! ) ಕಳಿಸುವ ಗಡಿಬಿಡಿ
ವಿಧ ವಿಧ ತಿನಿಸುಗಳಿಗೆ ಇದೆಯಲ್ಲ ಬೇಕರಿ!
ದೇಗುಲಕೆ ಹೊಗುವುದು ಬಾಕಿ ಇದೆಯಲ್ಲ
ದೈವ ಭಕುತಿಯನು ’ತೋರಿಸ’ಬೇಕಲ್ಲ!

ಮಾಲು ಫೋರಂ ಎಂದು ತಿರುತಿರುಗಿ ಶಾಪಿಂಗು
ಸುಸ್ತಾದಾಗ ಇದೆಯಲ್ಲ ಜಂಕ್ಸು ಕೋಲ್ಡ್ರಿಂಕ್ಸು!
ಕಾಂಕ್ರೀಟ್ ಕಾಡಿನ ಮಧ್ಯೆ ಮಕ್ಕಳ ಗಮ್ಮತ್ತು
ಕಂಡಿದೆ ಕೊಳ್ಳುಬಾಕ ಸಂಸ್ಕೃತಿಯಲ್ಲೇ ಜಗತ್ತು

ಯಾವ ಹಬ್ಬವಾದರು ವ್ಯತ್ಯಾಸವೆಂತು
ಅದು ಹಾಲಿಡೇ ಎಂಬುದೆ ಇಂಪಾರ್ಟೆಂಟು
ಗಡಿಬಿಡಿ ಒತ್ತಡದ  ನಡುವೆ ಒಂದು ಬಾರಿ
ಹಾಯಾಗಿ ಕಾಲು ಚಾಚಿ ಮಲಗಿದರೆ ಸಂತೃಪ್ತಿ !!  

Thursday, February 11, 2010

ಮಧ್ಯಂತರ

ನಾನು ಪರಮಸುಖಿ ಆದರೆ
ಸಂತೋಷದಿಂದ ಅಳೆಯದಿರಿ

ನಾನು ಸಿರಿವಂತೆ ಆದರೆ
ಸ್ಥಾನದಿಂದ ಅಳೆಯದಿರಿ

ನಾನು ಬಲ್ಲವಳು ಆದರೆ
ಸಾಧನೆಯಿಂದ ಅಳೆಯದಿರಿ


ನಾನು ದಿಟ್ಟೆ ಆದರೆ
ಧೈರ್ಯದಿಂದ ಅಳೆಯದಿರಿ


ನಾನು ಗುಣವಂತೆ ಆದರೆ
ಅಂತಃಶಕ್ತಿಯಿಂದ ಎಂದೆಂದೂ ಅಳೆಯದಿರಿ

Tuesday, February 2, 2010

ಆದರೂ...


ನೆನಪುಗಳೇ ಅದ್ಹೇಗೆ ಒಂದೊಂದಾಗಿ ಸೇರುತ್ತ ಹೋಗುವಿರಿ?
ಜೀವದಲ್ಲೂ ಇರುವಿರಿ ಭಾವದಲ್ಲೂ ಇರುವಿರಿ 
ರಾಗದಲ್ಲೂ ಇರುವಿರಿ ತಾಣದಲ್ಲೂ ಇರುವಿರಿ
ಪ್ರತಿಬಾರಿ ಆಗಮಿಸಿ ಮಧುರವಾಗಿ ಇರಿಯುವಿರಿ!!!

ಆದರೂ...

ಮರೆಯಬಯಸುವೆ ನಾ ಕಳೆದುಹೋದ 
ದಿನಗಳಲ್ಲಿ ಕಳೆದುಹೋದುದನ್ನ!
ಹೊದೆಯಬಯಸುವೆ ನಿರ್ಲಿಪ್ತವಾಗಿ 
ಕಟುವಾಸ್ತವದ ಕಂಬಳಿಯನ್ನ 

ಆದರೂ....

ಸೆರಗ ಚಾಚಿರುವೆ ಆಸೆಯಿಂದ ನಿಮ್ಮ 
ಜನ್ಮದಿನಗಳನ್ನು ಬಾಚಿ ತುಂಬಿಸಲು 
ತಿಳಿದಿದ್ದರೂ ಆ ಮಡಿಲು ಎಂದೆಂದಿಗೂ 
ತುಂಬಲಾರದೆಂದು!! 

ಆದರೂ..

ಸಹಿಸೆನು ಈ ನೆನಪುಗಳ ಇರಿತ ಆದರೂ 
ಬಿಡೆನು ಎಂದಿಗೂ ನಿಮ್ಮನ್ನು  ಮೆಲುಕುವ ಸವಿಯ!! 
ಇದೆಂಥ ಹಿಂಸೆ ಇದೆಂಥ ಹುಚ್ಚು!?
ಮರೆವೇ ಇಡಿಯಾಗಿ ಆವರಿಸಿಬಿಡಲಾರೆಯಾ ನನ್ನ?!!


Monday, February 1, 2010

Super woman!!

ಆಫೀಸಿನಲ್ಲಿ  ಎಲ್ಲರಿಂದ ಸಲಾಂ 
ಹೊಡೆಸಿಕೊಳ್ಳುವ ಧೀರ ವನಿತೆ
ಮನೆಯಲ್ಲಿ  ಕೆಲಸದಾಕೆಗೆ ಸಲಾಂ ಎಂದಳು!!!!

Friday, January 29, 2010

ವಿರೋಧಾಭಾಸ

ಸಂಪ್ರದಾಯಸ್ಥ  ಹಿರಿಯರು ಹೇಳಿದರು
ನನ್ನ ಜಾತಿಯ ಬಿಟ್ಟು ಹೊರಗಿನವರಲ್ಲಿ 
ತೊಟ್ಟು ನೀರು ಕುಡಿಯುವುದು ಅಸಂಭವ!

ಜೀವ ಹೋಗುವ ಸಂದರ್ಭದಲ್ಲಿ ಹೇಳಿದರು 
ವೈದ್ಯರ ಜಾತಿ ಯಾವುದಾದರೇನು 
ವೈದ್ಯೋ ದೇವೋ ಭವ!!!!

Wednesday, January 20, 2010

ಸಧ್ಯದ ದರದು.

            ಜೀವನದ  ಪ್ರತಿಯೊಂದು ಘಳಿಗೆಯೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಕಾಲದ ಗಣನೆಯಲ್ಲಿ ವರ್ತಮಾನ ಕಾಲವೆಂಬುದೆ ಇಲ್ಲ. ಭೂತ ಮತ್ತು  ಭವಿಷ್ಯದ  ಅತಿ ತೆಳ್ಳನೆಯ ಕೂದಲು ಗಾತ್ರದ ಎಳೆ ಇದು . ಆದರೆ ನಾವು ಯಾವಾಗಲೂ ಭೂತ ಭವಿಷ್ಯ ಗಳ  ಲೋಕದಲ್ಲೇ  ವಿಹರಿಸುತ್ತ  ಇರುತ್ತೇವೆ.ಅತಿ  ಪ್ರಮುಖವಾದ   ವರ್ತಮಾನ  ವನ್ನು ಯೋಚಿಸಲು ಚಿಂತಿಸಲೂ  ನಮಗ ವೇಳೆ ಇಲ್ಲ. ಈ ವರ್ತಮಾನ ವನ್ನು ವಿಸ್ತಾರ ಗೊಳಿಸುವ ಆಲೋಚನಯೇ ನಮಗಿಲ್ಲ. ಆದರೆ ಈ  ಜೀವನದ ವ್ರಮುಖ ಸಂಗತಿ  ಯಲ್ಲೇ ನಮ್ಮ ಸುಖ ಶಾಂತಿ ಅಡಗಿರುತ್ತದೆ .ಇಂದು ಇಂದಿಗೆ ನಿನ್ನೆ ನಿನ್ನೆಗೆ ಇರಲಿ ನಾಳೆಯು ನಾಳೆಗೆ ಎಂಬ ಸೂತ್ರವನ್ನು  ಶೀಘ್ರ ವಾಗಿ ಅಳವಡಿಸಿಕೊಳ್ಳುವ ಅಗತ್ಯತೆ ಈಗ ನಮ್ಮ ಮುಂದಿದೆ.ನನ್ನ ದೃಷ್ಟಿ ಎಲ್ಲಿಯ ವರೆಗೂ ಹಾಯು ತ್ತದೋ ಅಲ್ಲಿಯ ವರೆಗಿನ ನೋಟ ನನ್ನದು ,ದೂರದ ಮಂಜು ಮುಸುಕಿದ ದಿಗಂತ ವಲ್ಲ.ಸಧ್ಯದ ಕಣ್ಣೆದುರಿಗಿನ ಹಿಡಿದ ಕೆಲಸ ಮುಗಿಸುವ ಹೊರೆ ಇದ್ದಾಗ ಅದರ ಮುಂದಿನ ಆಲೋಚನೆ ನಮಗೇಕೆ ,ಅಲ್ಲವೇ? 

                                                                                                                                            ಎಸ್ .ಗಿರೀಶ ಪುತ್ರಾಯ.

Wednesday, January 6, 2010

ಎದೆಯೊಳಗಿನ ಹಣತೆ

ಎತ್ತಣೆತ್ತಣವೂ ಸುಡುವ ಬಿಸಿಲ ಬೇಗೆಗೆ
ಉರಿಯುತ್ತಿರುವ ನೆತ್ತಿಯ ಎತ್ತಿ
ಕಣ್ಣು ಕೀಲಿಸಿದರೂ ತೋರಲಿಲ್ಲವೆಲ್ಲಿಯೂ
ತಂಪೆರೆವ ತಂಪಲು.


ಬೀಸುತ ಎದುರಾಗುವ ಬಿರುಗಾಳಿಗೆ
ಎದೆಯೊಡ್ಡಿ ತೂರಿ ಬರುತ್ತಿರುವ
ಧೂಳಿಗೆ ಕಣ್ಣೊಡ್ಡಿ ಕಾಯುತಿದ್ದರೂ
ಸೋಕಲಿಲ್ಲವೆಂದೂ ಮುದ ನೀಡುವ ತಂಗಾಳಿ.


ಒಮ್ಮೊಮ್ಮೆ ಒಂಟಿಯಾಗಿ ಮತ್ತೊಮ್ಮೆ
ಜಂಟಿಯಾಗಿ ಎಡುವುತೇಳುತ
ಸಾಗುತಿದ್ದರೂ ಕಾಣಲಿಲ್ಲವೆಂದೂ
ತೀರದ ದೂರದ ಕೊನೆ.


ಬರಿಗಾಲ ತುಂಬ ಮುಳ್ಳುಗಳು ಕೊರೆದ
ಚಿತ್ತಾರ ಏರಿದಷ್ಟೂ ತಲುಪದ  ಗಿರಿಶಿಖರ 
ಕರಿಮೋಡದ ಸುತ್ತ ಕಂಡೂ
ಕಾಣದ ಬೆಳ್ಳಿಯ ಆವರಣ


ಮೈ ಬಣ್ಣ ಮಾಸಿದರೂ, ನಾಲಗೆ ಪಸೆ
ಆರಿದರೂ,ತಲೆಗೆದರಿ ಹರಡಿಡರೂ,
ಕಣ್ಣುಗಳು ಕೆಂಪೇರಿದರೂ,
ಆರಲಿಲ್ಲವೆಂದೂ ಎದೆಯೊಳಗಿನ ಹಣತೆ.