ಮೌನದ ಮಾತು

"ಮೌನ" ಎಂದೊಡನೆ ನೆನಪಾಗುವುದು,ಶಾಲಾ ದಿನಗಳಲ್ಲಿ ಯಾರಾದರು ದೇಶದ ನೇತಾರರು ಭೂಲೋಕ ತ್ಯಜಿಸಿದಾಗ, ಅದರ ಶೋಕಾಚರಣೆ ಪ್ರಯುಕ್ತ (ಶಾಲೆಗೆ ರಜೆ ಎಂಬ ಖುಶಿಯೊಡನೆ!) ಆಚರಿಸುವ ಮೌನಾಚರಣೆ. ಒಂದು ನಿಮಿಷ ಇಡೀ ಶಾಲೆಯ ಮಕ್ಕಳು ಸದ್ದಿಲ್ಲದೆ ಮೌನ ಆಚರಿಸುವಾಗ ಆವರಿಸುವ ನಿಶ್ಯಬ್ದ, ಅಸಹಜ, ಕೃತಕವೆನಿಸಿ ನಗು ಉಕ್ಕಿ ಬರುತಿತ್ತು.ಆಚೀಚೆ ಕಣ್ಣು ಹಾಯಿಸುತ್ತಾ ನಗೆ ತಡೆದು ತಡೆದೂ ಸಾಕಾಗಿ ಕಡೆಗೊಂದು ಸಾರಿ (ಒಂದು ನಿಮಿಷವಾಗುವ ಮೊದಲೆ!) "ಫುಕ್" ಎಂದು ನಕ್ಕು ಬಿಟ್ಟು ಟೀಚರರ ಕೆಂಗಣ್ಣಿಗೆ ಗುರಿಯಾದದ್ದಿದೆ.


ಗೆಳತಿಯರೊಡನೆ
ಜಗಳವಾದಾಗ, ಟೀಚರುಗಳು ಬೈಯುವಾಗ, ಅಪರಿಚಿತರು ಮನೆಗೆ ಬಂದಾಗ..ಇತ್ಯಾದಿ ಸಂದರ್ಭಗಳಲ್ಲಿ ಮೌನಕ್ಕೇ ಶರಣು.ಚಿಕ್ಕವಳಿರುವಾಗ ಅಮ್ಮ ಸಣ್ಣ ಪುಟ್ಟ ವಿಷಯಗಳಿಗೂ ಬೈಯುವಾಗ ನಾನು ಯಾವುದಕ್ಕೂ ಉತ್ತರವೇ ನೀಡದೆ ಮಾತು ಮರೆತಂತೆ ಮೌನವಹಿಸುವಾಗ ಅಮ್ಮನಿಗೆ ಸೋತ ಭಾವ ಆವರಿಸಿ ಮೈಯೆಲ್ಲ ಪರಚಿಕೊಳ್ಳುವಂತಾಗುತಿತ್ತು. ಹೀಗೆ ಮೌನವೂ ಒಂದೊದು ಸಾರಿ ಅಸ್ತ್ರದಂತೆ ಉಪಯೋಗವಾಗುವುದಿದೆ (ನನಗೆ!). ಹಾಗೆಯೇ ಮಾತಾಡುವ ಸಂದರ್ಭದಲ್ಲಿ ಮಾತಾಡದೆ ಮೌನವಹಿಸಿ ಸೋತದ್ದೂ ಇದೆ, ಕಳೆದುಕೊಂಡದ್ದೂ ಇದೆ!!


ಮೌನ
ಕೆಲವೊಂದು ಬಾರಿ ಅಸಹನೀಯ, ಕೆಲವೊಮ್ಮೆ ಸುಂದರ.ಮೌನವೂ ಎಷ್ಟು ಸುಂದರವಾಗಿರುತ್ತದೆ ಎಂದು ತಿಳಿಯಬೇಕಾದರೆ ಉತ್ತರ ಕನ್ನಡ ಜಿಲ್ಲೆಯ ಹಳ್ಳಿಗಳಿಗೆ ಹೋಗಬೇಕು.ಬೆಟ್ಟ ಗುಡ್ಡ, ಮರಗಿಡಗಳ ನಡುವೆ ಅಲ್ಲೊಂದು ಇಲ್ಲೊಂದು ಮನೆ. ಯಾವುದೇ ಸದ್ದು ಗದ್ದಲವಿಲ್ಲದೆ,ಬರೀ ಹಕ್ಕಿಗಳ ಚಿಲಿಪಿಲಿ,ಆಗಾಗ ದನಗಳ,ನಾಯಿಗಳ ಕೂಗು,ತಣ್ಣಗೆ ಬೀಸುವ ತಾಜಾ ಗಾಳಿ, ಕಣ್ಣು ಹಾಯಿಸಿದಲೆಲ್ಲಾ ಹಸಿರು....ಆಸ್ವಾದಿಸುತ್ತಾ ಕುಳಿತರೆ ನರನಾಡಿಗಳಲೆಲ್ಲಾ ಚೈತನ್ಯ ಉಕ್ಕಿ ಬಿಡುವುದು.


ಎಂಟೊ, ಒಂಭತ್ತೊ ಕ್ಲಾಸಿನಲ್ಲಿದ್ದಾಗ ಅಪ್ಪ ತಮ್ಮ ಹಳೆಯ ಎಮ್ ೮೦ ಗಾಡಿಯಲ್ಲಿ ನನ್ನನ್ನೂ,ತಮ್ಮನನ್ನೂ ಕೂರಿಸಿಕೊಂಡು .. ಜಿಲ್ಲೆಯ "ಸಿಂಥೇರಿ ರಾಕ್ಸ್"ಎಂಬಲ್ಲಿಗೆ ಕರೆದೊಯ್ದಿದ್ದರು.ನದಿಯೊಂದು ಬಂಡೆಗಳನ್ನು ಕೊರೆದು ಒಳನುಗ್ಗಿ ಹರಿಯುವ ನೋಟ ಕಣ್ಣಿಂದ ಮರೆಯಾಗಲು ಸಾಧ್ಯವೇ ಇಲ್ಲ. ವನಸಿರಿಯ ನಡುವೆ ಕುಳಿತು ಬಂಡೆಗಲ್ಲಿಗೆ ಕಟ್ಟಿದ್ದ ಜೇನುಗೂಡುಗಳನ್ನು ನೋಡುತ್ತ ಮೈಮರೆತು ಕುಳಿತ ನನ್ನನ್ನು ಅಪ್ಪ ಬಲವಂತವಾಗಿ ಹೊರಡಿಸಿದ್ದರು.ಅಂದು ಜಾಗ, ಪ್ರಶಾಂತತೆ ಜಗತ್ತಿನಲ್ಲೆ ಸುಂದರವೆನಿಸಿತ್ತು.ಮೂವರಿದ್ದರೂ ಅಂದು ನಮ್ಮನ್ನು dominate ಮಾಡಿದ್ದು ಮೌನವೇ.


ಕೆಲವೊಂದು
ಸಾರಿ ಮೌನ ಅಸಹನೀಯವಾಗಿರುತ್ತದೆ.ಆಪ್ತರೊಂದಿಗೆ ಮನಸ್ತಾಪ ಉಂಟಾದಾಗ ಮಾತಿನಲ್ಲಿ ಬಗೆಹರಿಯದೆಯೊ ಅಥವಾ ಬಗೆಹರಿಯುವುದೇ ಇಷ್ಟವಿಲ್ಲದಿರುವಾಗ ಕಾಡುವುದು ಮೌನ.ಇವಳು(ನು) ಮಾತಾಡಲಿ ಎಂದು ಅವನು(ಳು),ಅವನು(ಳು) ಮಾತಾಡಲಿ ಎಂದು ಇವಳು(ನು). ಹೀಗೆ ಒಮ್ಮೊಮ್ಮೆ ಗಂಟೆಗಟ್ಟಳೆ ಒಮ್ಮೊಮ್ಮೆ ದಿನಗಟ್ಟಳೆ ಮಾತಿಲ್ಲದಿರುವುದುಂಟು.ಇಂಥ ಮೌನ ಒಂದು ಥರ ಹಿಂಸೆ.ಎಷ್ಟು ಬೇಗ ಸಂಬಂಧ ಮೊದಲಿನ ಹಾಗಾದೀತು ಎಂಬ ಆತಂಕವಿದ್ದರೂ ಸ್ವಾಭಿಮಾನ ಬಿಡದು.ಎಷ್ಟೋ ಬಾರಿ ಮೌನವೇ ಗೆದ್ದು ಸಂಬಂಧಗಳೆ ಮುರಿದದ್ದಿದೆ.ಮುಂದುವರಿಯಲಾಗದೆ ಉಳಿದದ್ದಿದೆ.


ಮೌನವನ್ನು ಎಳ್ಳಷ್ಟೂ ಸಹಿಸದವರು ಮಕ್ಕಳು.ಮೌನವು ಅವರ ಅನುಭವಕ್ಕೆ ಬರುತ್ತಲೇ ತಾವೇ ಗದ್ದಲ ಹಾಕಲೂ ಆರಂಭಿಸಿ ಮೌನಕ್ಕೆ ಪೂರ್ಣವಿರಾಮವಿಡುತ್ತಾರೆ.ಮಕ್ಕಳಿರುವಲ್ಲಿ ಮೌನಕ್ಕೆ ಜಾಗವೆಲ್ಲಿ? :)


ಮೌನದ ಭೀಕರತೆ ಅರಿವಾದದ್ದು ನನ್ನ ಗಂಡನ ಮನೆಗೆ ಕಾಲಿಟ್ಟ ಮೊದಲ ದಿನ.ಅಮ್ಮನ ಹಿಂದೆ ಮುಂದೆ ಸುಳಿಯುತ್ತಾ ಇಡೀ ದಿನ ಕಚಪಚ ಎಂದು ಮಾತಾಡುವುದನ್ನೆ ಕಲಿತಿದ್ದ ನನಗೆ ಗಂಡನ ಮನೆಯಲ್ಲಿ ಅಗತ್ಯವಿದ್ದರಷ್ಟೇ ಮಾತಾಡುವ ರೀತಿ ನುಂಗಲಾಗದ ಮಾತಾಗಿತ್ತು.ನಿತ್ಯ ಸಂಜೆ ಏಳು ಘಂಟೆಯ ನಂತರ ಮನೆಯಲ್ಲಿ ಟೀವಿಯದ್ದೆ ರಾಜ್ಯಭಾರ. ಅಂದು ವಿದ್ಯುತ್ ಕೈ ಕೊಟ್ಟಿತ್ತು.ಮನೆಯಲ್ಲಿ ನಾನು ಹಾಗು ಅತ್ತೆ ಇಬ್ಬರೇ .ಎಲ್ಲೆಡೆ ನಿಶ್ಯಬ್ದ.ಅತ್ತೆಯವರೋ ಅಗತ್ಯವಿಲ್ಲದೆ ಒಂದು ಶಬ್ದವನ್ನೂ ಹೊರಡಿಸದವರು. ನನಗೋ ನನ್ನ ಹಳೆಯ ಜೀವನದ ನೆನಪು ಒತ್ತೊತ್ತಿ ಬರುತಿತ್ತು. ಅದನ್ನು ಅವರೊಡನೆ ಹಂಚಿಕೊಳ್ಳುವ ಬಯಕೆ.ಪುಸ್ತಕದೊಳಗೆ ತಲೆ ತೂರಿಸಿಕೊಂಡ ಅತ್ತೆ ತಲೆ ಎತ್ತುವುದನ್ನೆ ಕಾಯುತ್ತಾ ಅವರ ಮುಂದೆಯೇ ಕುಳಿತೇ ಇದ್ದೆ.ಹಾಗೇ ಕುಳಿತೇ ಇದ್ದೆ ಭರ್ತಿ ಎರಡು ಘಂಟೆಗಳ ಕಾಲ! ಮಾತೆ ಇಲ್ಲದೆ! ಮೊದಲ ಬಾರಿಗೆ ಒಂಟಿತನ ಎಂದರೆ ಏನು ಎಂದು ಅನುಭವಕ್ಕೆ ಬಂತು! ದಿನದ ಮೌನ ಎಷ್ಟು ಭೀಕರವೆನಿಸಿತ್ತೆಂದರೆ ಕುಳಿತಲ್ಲೆ ಕಣ್ಣುಗಳು ಹನಿಗೂಡಿದ್ದವು.ಅದನ್ನು ಅವಿತಿಡುವ ಪ್ರಯತ್ನವನ್ನೂ ಮಾಡಲಿಲ್ಲ.ಗಮನಿಸಲು ಯಾರೂ ಇರಲಿಲ್ಲ(ಇದ್ದರೂ)! .... ಬಿಡಿ, ನಂತರದ ದಿನಗಳಲ್ಲಿ ಮೌನವನ್ನೆ ಸಂಗಾತಿ ಮಾಡಿಕೊಂಡು ಬಿಟ್ಟೆ.ಮೌನವನ್ನು enjoy ಮಾಡುವುದನ್ನೂ ಕಲಿತೆ.
ಎಲ್ಲೊ ಓದಿದ ನೆನಪು, ಮೌನವಾಗಿರುವುದೆಂದರೆ ನಮ್ಮ ಆತ್ಮದೊಡನೆ ಸಂವಾದ ಮಾಡುವುದಂತೆ! :)


ಇನ್ನೂ ಎಷ್ಟೊ ವಿಷಯಗಳಿರಬಹುದು.ಅದು neverending! ಇದನ್ನು ಓದ್ತಾ ಓದ್ತಾ ನಿಮಗೂ ಏನೇನೋ ನೆನಪಾಗಬಹುದು. ಮೌನದ ಕುರಿತು ಮಾತುಗಳು ಹೊಳೆಯಬಹುದು. ಇಷ್ಟವಿದ್ದರೆ ನನ್ನೊಡನೆ ಹಂಚಿಕೊಳ್ಳಲೂಬಹುದು!! :)

Comments

Post a Comment

Popular posts from this blog

ಅಮ್ಮ

ಸಂಕ್ರಮಣ

ಹಬ್ಬ ಹಬ್ಬ !!