ಮಳೆಯೇ ಇಳಿಯೇ

ಒಮ್ಮೊಮ್ಮೆ ಸೋರು ಒಮ್ಮೊಮ್ಮೆ ತುಂತುರು
ಒಮ್ಮೊಮ್ಮೆ ಹನಿ ಹನಿ ಒಮ್ಮೊಮ್ಮೆ ಜೋರು.

ಬಾನಂಗಳದ ತುಂಬೆಲ್ಲ ಕಾರ್ಮುಗಿಲ ಹೊದಿಕೆ
ನಡುನಡುವೆ ರವಿಗೆ ಇಣುಕುವಾ ಬಯಕೆ

ಪಟ ಪಟ ಚಿಟ ಪಟ ಹನಿಗಳದೆ ಆಟ
ಇಹವನ್ನೇ ಮರೆಸುವ ರಮ್ಯ ನೋಟ

ನಡುನಡುವೆ ಗುಡುಗಿನ ಹದವಾದ ಮಿಳಿತ
ನೋಡಿದಷ್ಟೂ ತಣಿಯದು ಹಿತವಾದ ಸೆಳೆತ

ಅದರೊಂದಿಗೆ ಹೊಮ್ಮುವ ಕೋಲ್ಮಿಂಚಿನ ಹೊಳಪು
ರಭಸದಲಿ ಸೀಳುತಿದೆ ಭೂಮಿಯ ಉಡುಪು

ಅದ್ಯಾರ ವರವೋ ನಿನ್ನ ಚೆಲುವು
ಅದೇಕೆ ನನಗೆ ನಿನ್ನಲ್ಲಿ ಒಲವು

ಅದ್ಹೇಗೆ ನೀ ಮೆಲ್ಲನೆ ಮನವ ಆವರಿಸುವೆ
ಅದೇಕೆ ನೆನಪುಗಳ ಸರಮಾಲೆ ತರುವೆ

ನಮಗೋ ಭುವಿಯ ಮಸಿ ಮಾಡುವ ಚಪಲ
ನಿನಗೋ ಧರೆಯ ತೊಳೆದಿಡುವ ತವಕ

ನೀನಿಲ್ಲದೆ ಹಸಿರಿಲ್ಲ ನೀನಿಲ್ಲದೆ ಉಸಿರಿಲ್ಲ
ನಿನ್ನಿಂದಲೇ ಚೆಲುವೆಲ್ಲ ನಿನ್ನಿಂದಲೇ ಜಗವೆಲ್ಲ.

Comments

Popular posts from this blog

ಅಮ್ಮ

ಸಂಕ್ರಮಣ

ಹಬ್ಬ ಹಬ್ಬ !!