Sunday, March 29, 2009

ಪಯಣ

ಜೀವನದ ಪಯಣದಿ ಸಾಗಿ ಸೋಲುತಿಹರೆಲ್ಲ
ನಿಂತಲ್ಲೇ ನೆಲೆಯೂರುವಾಸೆ ಓಡುತಲೇ ಇದೆ ಕಾಲ.

ಜಗವನೇ ಹಿಡಿದಿಡುವ ತವಕ ನಿಲ್ಲಲೊಲ್ಲದು ಸಮಯ
ಯಾರ ಕೈಗೂ ನಿಲುಕದ ಈ ಕಾಲವೇ ವಿಸ್ಮಯ

ಮನವೆಂಬ ಹುತ್ತದೊಳಗೆ ಹುಚ್ಚಾಸೆ ಗಳ ಮೊತ್ತ
ಗುಣಿಸುತಲೇ ಹೋಗುವುದು ಅದೇನೋ ವಿಚಿತ್ರ

ಕಾಲದೊಡನೆ ನಮ್ಮೆಲ್ಲರ ಗೆಲ್ಲಲಾಗದ ಓಟ
ಜೀವವಿರುವವರೆಗೂ ಮುಗಿಯದು ಬದುಕಿನ ಜಂಜಾಟ

ನಿತ್ಯ ಹೊಸಬೆಳಗು ನಿತ್ಯ ಹೊಸ ನಿರೀಕ್ಷೆ
ನಿತ್ಯ ಹೊಂಗನಸುಗಳ ಸಾಕಾರದಾಪೇಕ್ಷೆ

ಸಾಗರದಲೆಗಳಲಿ ಮಿಂದೆದ್ದು ಬಂದನಾ ಸೂರ್ಯ
ಇದೋ ತಂದೆ ಹೊಸತೊಂದು ದಿನ ಹೊಸತೊಂದು ಪರ್ವ

ಹಿಡಿಯಷ್ಟು ಜೀವನ ಅಂಗೈಲಿರುವಾಗ
ಕ್ಷಣ ಕ್ಷಣ ಸವಿಯಲು ಆದಿಯೆನ್ತು ಅಂತ್ಯವೆಂತು
ಮುಗಿಯದಲ್ಲ ಈ ಪಯಣ .Saturday, March 28, 2009

ಸುಪುತ್ರನ ಅಣಿಮುತ್ತುಗಳು


ನೀವೆಂದಾದರೂ ಕನಸಿನಲೋಕ ಕಂಡಿದ್ದಿರಾ?ನಾನು ಕಂಡಿದ್ದೀನಿ. ನಾನಷ್ಟೇ ಅಲ್ಲ ನೀವೂ ಕಂಡಿದ್ದಿರಾ, ಆಶ್ಚರ್ಯ ಆಯ್ತಾ? ಎಲ್ಲರ ಕನಸಿನ ಲೋಕದ ಹೆಸರು ಒಂದೇ, ಅದುವೇ ಬಾಲ್ಯ. ಏನು ಎತ್ತ ಅಂತ ಅರ್ಥ ಆಗೋದರೊಳಗೆ ಕಳೆದ್ಹೋಗಿ ಬಿಟ್ಟಿರುತ್ತೆ. ನನ್ನ ಬಾಲ್ಯವಂತೂ ಕಳೆದ್ಹೋಗಿ ಬಿಟ್ಟಿದೆ. ಈಗ ನನ್ನ ಮಕ್ಕಳು ಆ ಅಮೂಲ್ಯವಾದ ಬಾಲ್ಯವನ್ನು ಅನುಭವಿಸ್ತಾ ಇದಾರೆ. ಅವರ ಆಟಗಳನ್ನು ನೋಡುವುದೇ ಒಂದು ಸಂತೋಷ. ಬಾಲಭಾಷೆ ಕೇಳುವುದಕ್ಕೆ ಚಂದ.ಅವರ ಮುಗ್ದ ಮಾತುಗಳನ್ನು ಬರವಣಿಗೆಯಲ್ಲಿ ರೆಕಾರ್ಡ್ ಮಾಡಿ ಇಡಬೇಕೆಂದು ಹೊರಟಿದ್ದೇನೆ. ಇದು ನನಗೋಸ್ಕರ ಅನ್ನುವದಕ್ಕಿಂತ ಅವರಿಗೋಸ್ಕರ ಬರೆಯುತ್ತಿದ್ದೇನೆ. so , dedicated to my beloved children karan and thanisha.
-------------------------------------------------------------------------------------
ಕರಣ್: ಅಮ್ಮ ನಕ್ಷತ್ರಗಳೇಕೆ ಕೆಳಗೆ ಬಿಳುವುದಿಲ್ಲಮ್ಮ?
ನಾನು(ಅಯ್ಯಬ್ಬ?) : ಅವೆಲ್ಲ ತುಂಬ ದೂರದಲ್ಲಿದೆ ಪುಟ್ಟ ಅವೆಲ್ಲ ಆಕಾಶದಲ್ಲಿ ಸುಮ್ಮನೆ ನಿಂತಿರ್ತಾವೆ .
ಕರಣ್: ?
ನಾನು: ಅವನ್ನೆಲ್ಲ ಫೆವಿಕಾಲ್ ಹಾಕಿ ಅಂಟಿಸಿರ್ತಾರೆ.
ಕರಣ್ : ಯಾರು?
ನಾನು: ದೇವರು.
ಕರಣ್: ಹೌದಾ?
ನಾನು:ಹೌದು.(ಸದ್ಯ ತೃಪ್ತಿ ಆಯ್ತಲ್ಲ!)
----------------------------------------------------------------------------------------
ಕರಣ್ :ಮಣ್ಣಿನಡಿ ಏನಿರುತ್ತೆ?
ನಾನು: ಕಲ್ಲಿರುತ್ತೆ.
ಕರಣ್: ಕಲ್ಲಿನಡಿ?
ನಾನು:ನೀರಿರುತ್ತೆ.
ಕರಣ್: ನೀರಿನಡಿ?
ನಾನು: ಲೋಹಗಳಿರುತ್ತೆ.
ಕರಣ್:?
ನಾನು: ಕಬ್ಬಿಣ ಇರುತ್ತೆ.
ಕರಣ್: ಕಬ್ಬಿಣದಡಿ?
ನಾನು: ಬೆಂಕಿ ಇರುತ್ತೆ.
ಕರಣ್:ಬೆಂಕಿಯ? ಮತ್ತೆ ನಮಗ್ಯಾಕೆ ಬಿಸಿ ಆಗ್ತಾ ಇಲ್ಲ?
ನಾನು:ನಡುವೆ ನೀರಿರುತ್ತಲ್ಲ, ಅದಕ್ಕೆ ಇಲ್ಲಿ ಬಿಸಿ ಆಗ್ತಾ ಇಲ್ಲ.
ಕರಣ್: (ಮೌನ!) (ಸದ್ಯ)
-----------------------------------------------------------------------------------
ನಾನು:ಎ ಕರಣ್, ಎಲ್ಲಿ ತೋರ್ಸು,ಎರಡು ತಕೋ ಅಂದ್ರೆ ಮೂರೂ ಮೂರೂ ಬಿಸ್ಕೆತ್ತ ತೊಗೊಂಡಿದ್ದಾ?
ಕರಣ್: ಅಮ್ಮ ನಾಲ್ಕು ತೊಕೊಂಡಿಲ್ಲಲ್ಲಮ್ಮ!
ನಾನು:!!!!
--------------------------------------------------------------------------------------
ಕರಣ್: ಅಮ್ಮ ತನಿಶ ಹುಟ್ಲೇ ಬಾರದಾಗಿತ್ತು ,
ನಾನು: ಯಾಕೆ ಚಿನ್ನ?
ಕರಣ್:( ಅಳುತ್ತಾ) ಅವಳು ಎಲ್ಲ ನಂಗೆ ಬೇಕು ಅಂತಾಳೆ . ನೀನು ಯಾಕೆ ಹುಟ್ಟಿಸಿದ್ದು ಅವಳನ್ನ. ವಾಪಾಸು, ಹೊಟ್ಟೆಗೆ ಹಾಕಿಕೊಂಡು ಬಿಡು !
ನಾನು: ಅಯ್ಯೋ ಅದು ಹೇಗ್ ಆಗುತ್ತೆ ಪುಟ್ಟ? ಈಗ ಅವಳು ದೊಡ್ದೊವಳಾಗಿದ್ದಾಳಲ್ಲ!? ನನ್ನ ಹೊಟ್ಟೆ ಸಾಕಾಗೋದಿಲ್ಲ .
ಕರಣ್:(ಸ್ವಲ್ಪ ಯೋಚಿಸಿ), ಹಾಗಾದ್ರೆ ದೊಡ್ಡನ ಹೊಟ್ಟೆಗೆ ಹಾಕಿ ಬಿಡು. ಅವರ ಹೊಟ್ಟೆ ದೊಡ್ಡದಿದೆಯಲ್ಲ!!.

-----------------------------------------------------------------------------------------
ಪವನ ನಮ್ಮ ಮನೆಗೆ ಬಂದಿದ್ದ ಸಂದರ್ಭ. ಆ ಸಮಯದಲ್ಲಿ ಕರಣ್, ಮಾವ ಎಲ್ಲಿರುತ್ತಾನೋ ಅಲ್ಲೇ ಹಾಜರ್.ಒಮ್ಮೆ ಶೇವಿಂಗ್ ಮಾಡಬೇಕೆಂದು ಕನ್ನಡಿ ಎದುರು ಕುಳಿತಾಗ ಕರಣ್ ಅವನ ಪಕ್ಕದಲ್ಲೇ ಆಸೀನನಾಗಿ ಕುತೂಹಲದಿಂದ ನೋಡುತ್ತಿದ್ದ.ಪ್ರಶ್ನೆಗಳು ಪ್ರಾರಂಭವಾದವು.

ಕರಣ್: ಮಾಮ,ನನಗೂ ಹೀಗೆ ಕೂದಲು ಬರುತ್ತಾ?

ಪವನ: ಹೌದು.ದೊಡ್ಡವನಾದ ಮೇಲೆ ಬರುತ್ತೆ.

ಕರಣ(ಸ್ವಲ್ಪ ಯೋಚಿಸಿ): ಹುಡುಗಿರಿಗೆ ಯಾಕೆ ಬರೋಲ್ಲ?

ಪವನ್: ಅವರು ಹುಡುಗಿಯರು ಅದಕ್ಕೆ ಬರೋಲ್ಲ!

ಕರಣ್(ಉತ್ತರದಿಂದ ಸಮಾಧಾನವಾದ ಹಾಗೆ ಕಾಣಲಿಲ್ಲ):ಅದು ಹಾಗಲ್ಲ.

ಪವನ್:ಮತ್ತೆ ಹೇಗೆ?

ಕರಣ್: ಹುಡುಗಿಯರು ದೊಡ್ದವರೇ ಆಗೋದಿಲ್ಲ!!ಅದಕ್ಕೆ ಅವರಿಗೆ ಕೂದಲು ಬರುವುದಿಲ್ಲ.ಈಗ ನೋಡು ತನಿಶ ಎಷ್ಟು ದಿನ ಆದರೂ ಇನ್ನೂ ನನಗಿಂತ ಚಿಕ್ಕವಳೇ ಇದ್ದಾಳೆ!!

Thursday, March 26, 2009

ಎಪಿಸೋಡ್ 2

ಪ್ಲೀಸ್ ಬೈಬೇಡಿ, ನಾನೇನು ಹಿಂದಿ ಸಿರಿಯಲ್ ತರಹ ಎಳೆಯೋಲ್ಲ. ಈ ಪಾಯಿಂಟ್ ಮೊನ್ನೆಯಷ್ಟೇ ಫ್ಲಾಶ್ ಆಯ್ತು. ಬರೀಲೇಬೇಕು ಅನ್ನಿಸ್ತ ಇದೆ.ಅದೇನೆಂದರೆ ಈ ಪ್ರೀತಿ ಅನ್ನೋಳಿಗೆ ಅಲ್ಲಲ್ಲ !! ಈ ಪ್ರೀತಿ ಅನ್ನೋದಿಕ್ಕೆ ಸ್ಕಿಜೋಫ್ರೀನಿಯ ಕಾಯಿಲೆಯಂತೆ! ಹ್ಞಾ! ಅದ್ಕೆ ಇರ್ಬೇಕು ಪ್ರೀತಿಯನ್ನು ತಲೇಲಿ ತುಂಬ್ಕೊಂಡವನಿಗೆ ಏನು ತಿಂದೆ, ಏನು ಕುಡಿದೆ ಅನ್ನೋದು ನೆನಪಿರೋಲ್ಲ ಯಾರನ್ನು ನೋಡಿದೆ ,ಯಾರನ್ನು ಬಿಟ್ಟೆ ಅಂತ ಗೊತ್ತಾಗೊಲ್ಲ, ಯಾರು ಏನು ಹೇಳಿದರೂ ತಲೆಯೊಳಗೆ ಇಳಿಯುವುದೇ ಇಲ್ಲ! ನೋಡಿ ಎಂತ ಪರಿಸ್ಥಿತಿ? ಬೇಕಾ ಇದು?! ಆದ್ರೆ ಪ್ರೀತಿ ಅನ್ನೋದೇನ್ ಹೇಳಿ ಕೇಳಿ ಬರುತ್ತಾ ? ವೈರಲ್ ಇನ್ಫೆಕ್ಷನ್ ತರ ಬಂದು ಮೆದುಳಲ್ಲಿ ವಕ್ರಯಿಸಿಕೊಂಡ ಮೇಲೆ ಗೊತ್ತಾಗೋದು. ಅದರ ಹಿಡಿತ ಅಂದ್ರೆ ಉಡದ ಹಿಡಿತ.

ಈ ಪ್ರೇಮದ ಟಾರ್ಗೆಟ್ ಯಾವುದು ಗೊತ್ತ? ನಂ ಎದೆ ಗೂಡಲ್ಲಿ ಬೆಚ್ಚಗೆ ಕುಳಿತು ಮಿಡಿತಾ ಇರೋ ಹೃದಯ. ಪ್ರೀತಿ ಅಮರಿಕೊಂಡ ಕೂಡಲೆ ಹಾರ್ಟ್ಗೆ ವರ್ಕ್ ಲೋಡ್ ಜಾಸ್ತಿ ಆಗುತ್ತೆ. ಪ್ರೀತಿಸೋ ವ್ಯಕ್ತಿ ಎದುರು ಸಿಕ್ಕರೆ,ಫೋನಿನಲ್ಲಿ ಮಾತಾಡಿದ್ರೆ , ಇದೇನೂ ಬೇಡ ಬರೀ ನೆನಪು ಬಂದ್ರೆ ಹೃದಯ ಸಿಕ್ಕಾಪಟ್ಟೆ ಹೊಡೆದುಕೊಳ್ಳಲು ಶುರು ಆಗುತ್ತೆ. ಅದೇ ಪ್ರೀತಿಸೋ ವ್ಯಕ್ತಿ ದಕ್ಕದೇ ಹೋದರಂತೂ ತಿರುಚಿ ತಿರುಚಿ ಇಡುತ್ತಲ್ರೀ ಈ ಹಾರ್ಟು ಆ ಸಂಕಟ ಅನುಭವಿಸಿದೊರ್ಗೆ ಗೊತ್ತು. ಥೂ ! ಈ ಹಾಳು ಪ್ರೀತಿ ಅನ್ನೋದು ಯಾಕಾದ್ರೂ ಇದೆಯೋ?!