Posts

Showing posts from 2009

ಸಂಗಾತಿ

Image
ಮನಸಿನ ಪರದೆಯಲಿ ಯಾರೂ ಇರದಾಗ ಬಹುಮೆಲ್ಲನೆ ನಡೆದು ಬಂದು ಎಂದೂ ಅಳಿಸಲಾಗದಂಥ ಹೆಜ್ಜೆಗುರುತು ಮೂಡಿಸಿ ಬಿಟ್ಟೆ. ಭದ್ರತೆಯೆಂಬ ಸಿಂಹಾಸನದಲಿ ಭದ್ರವಾಗಿ ಕೂರಿಸಿ ಸುತ್ತಲೂ ಕನಸುಗಳಿಂದ ಹೆಣೆದ ಸುಭದ್ರವಾದ ಕೋಟೆ ಕಟ್ಟಿದೆ ನನ್ನಯ ಒಂದೊಂದು ಕಣ್ಣೀರಿನ ಹನಿಯೂ ಸೋಲೆಂದು ಭಾವಿಸಿ ಲೆಕ್ಕ ತಪ್ಪದಂತೆ ಹೆಕ್ಕಿ ಬೊಗಸೆಯಲಿಟ್ಟುಕೊಂಡು ನಿರಂತರ ಅದರೆದುರು ಸೆಣಸುತ್ತಲಿರುವೆ ಭರವಸೆ ಕಳೆದುಕೊಂಡು ದಿಕ್ಕು ತಪ್ಪಿ ದೈನ್ಯದಲಿ ನಿಂತಾಗ ಕೈ ತೋಳಿನಾಸರೆ ನೀಡಿ ಎದೆಗಾನಿಸಿ ನೂರಾನೆ ಬಲ ತುಂಬುವೆ ಸಂತಸದ ಕ್ಷಣಗಳಲಿ ನಾ ನಗುವ ಪರಿ ಕಂಡು ಗೆದ್ದ ಭಾವ ತುಂಬಿಕೊಂಡು ಮಂದಹಾಸ ಬೀರುತ ಸಮಾಧಾನದ ನಿಟ್ಟುಸಿರ ಬಿಡುವೆ ಸದಾ ಹಿಂಬಾಲಿಸುವ ನಿನ್ನ ಕಣ್ಣುಗಳಲ್ಲಿ ಯಾವ ಯಾವ ಅರ್ಥ ಹುಡುಕಲಿ? ಆರಾಧನೆಯೇ ಪ್ರೀತಿಯೇ ಕಾಳಜಿಯೇ ಒಡೆತನವೇ ಅಥವಾ ಎಲ್ಲವೂ ಬೆರೆತ ಅಚ್ಚ ಶ್ವೇತವರ್ಣದ ಕಾಂತಿಯೇ ? ಇದಕೂ ಮೀರಿದನು ಬಯಸಿ ನಾ ಖಂಡಿತಾ ಸ್ವಾರ್ಥಿಯಾಗಲಾರೆ

ನಿರೀಕ್ಷೆಗಳು

ಅಂತ್ಯವೆಂದುಕೊಂಡದ್ದು ಆರಂಭವಾದಾಗ ಹುಟ್ಟುವವು ಹೊಸ ನಿರೀಕ್ಷೆಗಳು ಕಡಲ ತೀರಕೆ ತೆರೆ ಅಪ್ಪಳಿಸುವಂತೆ ಪ್ರತಿ ಬಾರಿಯೂ ಹೊಸ ನಿರೀಕ್ಷೆಯೊಂದಿಗೆ ಎಲ್ಲೆಲ್ಲೂ ನಿರೀಕ್ಷೆಗಳು ಎಲ್ಲರಲ್ಲಿಯೂ ನಿರೀಕ್ಷೆಗಳು ನಮ್ಮಲ್ಲೂ ನಿರೀಕ್ಷೆಗಳು ನಮ್ಮವರಲ್ಲೂ ನಿರೀಕ್ಷೆಗಳು ಒಂದರ ಸಾವು ಅದರ ಬೆನ್ನಲ್ಲೆ ಹುಟ್ಟು ಅಂತ್ಯವೆಂಬುದೆ ರೋಚಕ ಆರಂಭ ಎಲ್ಲಿಯೂ ಹೊಸತನವೆಂಬುದು ಮಾತ್ರವಿಲ್ಲ ಕೆಲವರ ನಿರೀಕ್ಷೆಗಳಿಗೆ ಸಂತನ ಮುಖವಾಡ ಇನ್ನು ಕೆಲವರ ನಿರೀಕ್ಷೆಗಳು ದಬ್ಬಾಳಿಕೆಯ ಆಗರ ಹೇಗಿದ್ದರೂ ಪರಿಣಾಮ ಮಾತ್ರ ನಿಶ್ಚಿತ ಕಣ್ಣೀರು ಇಲ್ಲವೇ ಆನಂದಭಾಷ್ಪ ಕೆಲವರು ನಿರೀಕ್ಷೆಗಳೊಂದಿಗೆ ಬದುಕಿ ಸತ್ತರು ಹಲವರು ನಿರೀಕ್ಷೆಗಳೊಂದಿಗೆ ಬದುಕಿಯೂ ಸತ್ತರು ಪ್ರತಿ ಬಾರಿ ಪುನಶ್ಚೇತನ ಹೊಸ ನಿರೀಕ್ಷೆಯ ಹುಟ್ಟಿನೊಂದಿಗೆ ಎಲ್ಲಿಯವರೆಗೆ..... ಆರಂಭ ಎಂದುಕೊಂಡದ್ದು ಅಂತ್ಯವೆಂದೆನಿಸುವವರೆಗೆ

ಆ ಕ್ಷಣ

ಆ ಕಣ್ಣುಗಳಿಂದ ಹೊರಟ ಸುರೆಯು ನೇರ ಮನದೊಳಿಳಿದೊಡೆ ದೇಹದೊಳೆಲ್ಲ ಸಣ್ಣ ನಡುಕವೇರಿ ಇಹಪರವನೆಲ್ಲ ಮರೆಸಿ ಬಾನುಭುವಿಗಳೊಂದಾಗಿ ಕೈಗೆ ಕೈ ಸೇರಿಸಿ ತಮ್ಮೆಡೆಗೆ ಬರಸೆಳೆದು ತೇಲಿಸಿ ಇಗೋ ಕಾಣು ಇಲ್ಲೊಂದು ನೀನರಿಯದ ಅತಿ ಮೋಹಕ ಪ್ರಪಂಚವುಂಟು ಎಂದಾಗ..... ಕೈ ಚಿವುಟಿಕೊಂಡು ನಾನೆಂದೆ ಹೇ ಮರುಳು ಮನವೇ! ನೀನೆಲ್ಲಿರುವೆ ?!!

ನಿರ್ಲಿಪ್ತ

ಹಸಿರೆಲೆಯೊಂದು ಸಾಗುತಿದೆ ಮುಳುಗುತೇಳುತ ನದಿಯಲಿ ಎತ್ತಣಪಯಣವೆಂಬುದನರಿಯದೆ ಅಲೆಯೊಡನೆ ಅಲೆಯಾಗಿ ಶಿಲೆಯೊಡನೆ ಶಿಲೆಯಾಗಿ ಕಸದೊಡನೆ ಕಸವಾಗಿ ನೇಸರನೊಡನೆ ರಂಗಾಗಿ ದಿಕ್ಕು ದೆಸೆಯಿಲ್ಲ ದಾರಿಗೊಂದು ಗುರಿಯಿಲ್ಲ ಸಾಗುವ ಹಠವಿಲ್ಲ ನಿಲ್ಲುವ ಆಸೆಯೂ ಇಲ್ಲ ಸವೆದ ಹಾದಿಯಲಿ ಹೆಜ್ಜೆಯ ಗುರುತೂ ಇಲ್ಲ ಯಾರು ಬಲ್ಲರು ಯಾವ ಮರದ ಹೆಮ್ಮೆಯಾಗಿತ್ತೆಂದು ಯಾರು ಸೆಳೆದು ಬಿಟ್ಟರೆಂದು ಎಷ್ಟು ದಿನದ ಪಯಣವೆಂದು ಸಾಗುತಲೇ ಇದೆ ನೀರಿನೊಡನೆ ತಡೆಯುವರೆಂಬ ಭಯವಿಲ್ಲ ತಡೆದರೂ ಬೇಸರವಿಲ್ಲ ಬಳುಕುತ ಈಜುವ ಬಗೆ ಮಾತ್ರ ಗೊತ್ತು ಅದುವೆ ನಿರ್ಲಿಪ್ತ ಪ್ರಯಾಣಿಕ!

ಮೌನದ ಮಾತು

" ಮೌನ " ಎಂದೊಡನೆ ನೆನಪಾಗುವುದು , ಶಾಲಾ ದಿನಗಳಲ್ಲಿ ಯಾರಾದರು ದೇಶದ ನೇತಾರರು ಭೂಲೋಕ ತ್ಯಜಿಸಿದಾಗ , ಅದರ ಶೋಕಾಚರಣೆ ಪ್ರಯುಕ್ತ ( ಶಾಲೆಗೆ ರಜೆ ಎಂಬ ಖುಶಿಯೊಡನೆ !) ಆಚರಿಸುವ ಮೌನಾಚರಣೆ . ಒಂದು ನಿಮಿಷ ಇಡೀ ಶಾಲೆಯ ಮಕ್ಕಳು ಸದ್ದಿಲ್ಲದೆ ಮೌನ ಆಚರಿಸುವಾಗ ಆವರಿಸುವ ನಿಶ್ಯಬ್ದ , ಅಸಹಜ , ಕೃತಕವೆನಿಸಿ ನಗು ಉಕ್ಕಿ ಬರುತಿತ್ತು . ಆಚೀಚೆ ಕಣ್ಣು ಹಾಯಿಸುತ್ತಾ ನಗೆ ತಡೆದು ತಡೆದೂ ಸಾಕಾಗಿ ಕಡೆಗೊಂದು ಸಾರಿ ( ಒಂದು ನಿಮಿಷವಾಗುವ ಮೊದಲೆ !) " ಫುಕ್ " ಎಂದು ನಕ್ಕು ಬಿಟ್ಟು ಟೀಚರರ ಕೆಂಗಣ್ಣಿಗೆ ಗುರಿಯಾದದ್ದಿದೆ . ಗೆಳತಿಯರೊಡನೆ ಜಗಳವಾದಾಗ , ಟೀಚರುಗಳು ಬೈಯುವಾಗ , ಅಪರಿಚಿತರು ಮನೆಗೆ ಬಂದಾಗ .. ಇತ್ಯಾದಿ ಸಂದರ್ಭಗಳಲ್ಲಿ ಮೌನಕ್ಕೇ ಶರಣು . ಚಿಕ್ಕವಳಿರುವಾಗ ಅಮ್ಮ ಸಣ್ಣ ಪುಟ್ಟ ವಿಷಯಗಳಿಗೂ ಬೈಯುವಾಗ ನಾನು ಯಾವುದಕ್ಕೂ ಉತ್ತರವೇ ನೀಡದೆ ಮಾತು ಮರೆತಂತೆ ಮೌನವಹಿಸುವಾಗ ಅಮ್ಮನಿಗೆ ಸೋತ ಭಾವ ಆವರಿಸಿ ಮೈಯೆಲ್ಲ ಪರಚಿಕೊಳ್ಳುವಂತಾಗುತಿತ್ತು . ಹೀಗೆ ಮೌನವೂ ಒಂದೊದು ಸಾರಿ ಅಸ್ತ್ರದಂತೆ ಉಪಯೋಗವಾಗುವುದಿದೆ ( ನನಗೆ !). ಹಾಗೆಯೇ ಮಾತಾಡುವ ಸಂದರ್ಭದಲ್ಲಿ ಮಾತಾಡದೆ ಮೌನವಹಿಸಿ ಸೋತದ್ದೂ ಇದೆ , ಕಳೆದುಕೊಂಡದ್ದೂ ಇದೆ !! ಮೌನ ಕೆಲವೊಂದು ಬಾರಿ ಅಸಹನೀಯ , ಕೆಲವೊಮ್ಮೆ ಸುಂದ

ಹೀಗೊಂದು ಕಥೆ

ಒಂದೂರಿನಲ್ಲಿ ಒಂದು ಪುಟ್ಟ ಹುಡುಗಿ ಇದ್ದಳು. ಅವಳ ಹತ್ತಿರ ಅವಳಷ್ಟೇ ಪುಟ್ಟದಾದ ಒಂದು ಗೊಂಬೆ ಇತ್ತು. ಆ ಗೊಂಬೆ ಎಂದರೆ ಅವಳಿಗೆ ಪಂಚಪ್ರಾಣ.ಅದನ್ನು ಬಿಟ್ಟಿರಲಾರದಷ್ಟು ಪ್ರೀತಿ.ತಿನ್ನುವಾಗ, ಮಲಗುವಾಗ ಆಡಲು ಎಲ್ಲದಕ್ಕೂ ಅವಳಿಗೆ ಆ ಗೊಂಬೆ ಬೇಕೇ ಬೇಕು.ಎಲ್ಲೇ ಹೋದರು ಅದನ್ನು ತನ್ನ ಸಂಗಡ ಕರೆದೊಯ್ಯುತ್ತಿದ್ದಳು. ಹೀಗೆ ಒಮ್ಮೆ ಅಜ್ಜನ ಮನೆಗೆ ಹೋದಾಗ ಯಾರೋ ಆ ಗೊಂಬೆಯನ್ನು ಕದ್ದುಬಿಟ್ಟರು.ಹುಡುಗಿಯ ಸಂಕಟ ಹೇಳತೀರದು.ಯಾರು ಎಷ್ಟು ಸಮಾಧಾನಿಸಿದರೂ ಆ ಹುಡುಗಿ ತನಗೆ ಅದೇ ಗೊಂಬೆ ಬೇಕೆಂದು ರಚ್ಚೆ ಹಿಡಿಯುತ್ತಿದ್ದಳು. ದಿನಗಟ್ಟಳೆ ಅದನ್ನೆ ನೆನೆಯುತ್ತಾ ದುಖಃ ಸಾಗರದಲ್ಲಿ ಮುಳುಗಿದಳು..ಅವಳ ತಂದೆ ಒಂದಲ್ಲ ಎರಡಲ್ಲ ನಾಲ್ಕು ಗೊಂಬೆಗಳನ್ನು ತಂದು ಕೊಟ್ಟರೂ ಹುಡುಗಿಗೆ ತೃಪ್ತಿಯಾಗಲಿಲ್ಲ. ದಿನಗಳು ಕಳೆದರೂ ಹುಡುಗಿಗೆ ಅದರ ನೆನಪು ಮಾಸಲಿಲ್ಲ. ಹಾಗೆಯೆ ಪರಿಸ್ಥಿತಿಗೆ ಹೊಂದುಕೊಂಡಳು. ಆದರೂ ಮನದಲ್ಲಿ ಆ ಗೊಂಬೆಯನ್ನು ಕಳೆದುಕೊಂಡ ವೇದನೆ ಉಳಿದುಕೊಂಡಿತ್ತು.ಮೊದಲಿನ ಉತ್ಸಾಹ ಮಾಯವಾಗಿತ್ತು.ಒಮ್ಮೊಮ್ಮೆ ಅದರ ನೆನಪು ಉಕ್ಕಿ ಬಂದು ಅಳುತ್ತಾ ಕುಳಿತು ಬಿಡುವಳು. ಹೀಗೆ ಒಂದು ವರ್ಷ ಕಳೆಯಿತು. ಅಚ್ಚರಿಯೆಂಬಂತೆ ಆ ಗೊಂಬೆ ಅವಳ ತಂದೆಗೆ ಮರಳಿ ಸಿಕ್ಕಿತು.ಅವರು ಅತೀವ ಆನಂದದಿಂದ ಮಗಳಿಗೆ ತಂದುಕೊಟ್ಟರು.ಆಗ ಆ ಹುಡುಗಿಯ ಸಂತಸ ಹೇಳತೀರದು.ಆ ಗೊಂಬೆ ಈಗ ಮೊದಲಿನಂತಿರದೆ ಬಣ್ಣ ಮಾಸಿತ್ತು. ಅಲಲ್ಲಿ ಹರಿದಿತ್ತು. ಆದರೂ ಹುಡುಗಿಗೆ ಗೊಂಬೆ ಸಿಕ್ಕ ಸಂತೋಷದಲ್ಲಿ ಅದ್ಯಾವುದೂ

ಪರಿಧಿಯ ಅಂಚಿನಲ್ಲಿ

ತುಂಬಿದ ಹೃದಯಕೆ ಹರಿಸಲು ಬೇಕಿದೆ ಒಂದು ದಾರಿ ಕ್ಷೀಣ ಸ್ವರದಿಂದ ತೇಲಿ ಬಂತೊಂದು ಅಸ್ಪಷ್ಟ ಕರೆ ನನ್ನೊಳಗಿನ ಪ್ರಪಂಚದಲ್ಲೆ ನಾನು ಹಲವರಿಗೆ ನನ್ನೊಳಗೆ ನಾನಿಲ್ಲದಿರುವ ಅರಿವು ಏನಾಗುತಿದೆ...... ಬಿಸಿಯುಸಿರೊಂದು ಜೊತೆಯಾಗಿ ಸದಾ ಬೆಂಬಿಡದೆ ಕಾಡುವಾಗ ಕಣ್ಣಂಚಲಿ ಮೂಡುವ ನಗೆಯನು ಮರೆಮಾಚುವ ಮುನ್ನ ನಾನಾರೆಂಬುವ ಪ್ರಶ್ನೆ ಕಾಮನಬಿಲ್ಲಿಗೆ ಕೊಡೆಯೇ ಅಡ್ಡ ಬದುಕಿನಲ್ಲಿ ಭ್ರಮೆಗಳೊ ಬದುಕೇ ಭ್ರಮೆಯೋ ಎಂದರಸುವ ಆತುರದಲ್ಲಿ ಕೂಡಿ ಕಳೆವ ಲೆಕ್ಕಾಚಾರದಲ್ಲಿ ನಮ್ಮನ್ನೇ ಇಂಚಿಂಚಾಗಿ ಕೆಳೆದುಕೊಳ್ಳುವಾಗ ಅಚ್ಚರಿ ಎನಾಗುತ್ತಿದೆಯೆಂದು ನಿರ್ವಾತದಲಿ ರೆಕ್ಕೆ ಪುಕ್ಕ! ಅವರಿವರಿಂದ ನಾವು ನಮ್ಮಿಂದ ಮಗದೊಬ್ಬರು ವರ್ತುಲದೊಳಗೊಂದು ವರ್ತುಲ ಅದಕೊಂದು ಹೆಸರು ಪರಿಧಿಯಲ್ಲಿ ನಿಂತ ಹೆಜ್ಜೆ ಆದರೂ ಮನದಲ್ಲಿ ಹರುಷ ದಿಗಂತದಾಚೆಗಿನ ಪ್ರಪಂಚ ಎಂದೆಂದೂ ಸುಂದರ.

ಬಪ್ಪ್ರ್ಯಲ್ಲಾ ಕುಂದಾಪ್ರಕ್ಕೆ!

( ಧಾರವಾಡದ ಹೋಗ್ರಿ , ಬರ್ರಿ , ಮೈಸೂರು ಸೀಮೆಯ ಹೋಗಿ , ಬನ್ನಿ ಎಂಬುದು ನಾನು ಬಾಲ್ಯದಿನ್ದಲೂ ಕೇಳಿ ಕಲಿತ ಭಾಷೆ . ಆದರೆ ಕುಂದಾಪುರದ ( ಕುಂದಾಪ್ರ !) ಹೋಯ್ಕ , ಬರ್ಕ ಮಾತ್ರ ತೀರಾ ಅಪರಿಚಿತವಾಗಿತ್ತು . ಮೊದಮೊದಲಿಗೆ ಇದು ಕನ್ನಡವೇನಾ ಎಂಬಷ್ಟು ಗೊಂದಲ . ಈ ಭಾಷೆಗೆ , ಅದರ ವೇಗಕ್ಕೆ ಹೊಂದಿಕೊಂಡು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾದರೆ ( ಮಾತಾಡುವುದಂತೂ ದೂರದ ಮಾತು !!) ಭರ್ತಿ ಎರಡು ವರ್ಷ ಬೇಕಾಯ್ತು ! ನೋಡಿ ಈಗ ಆ ಭಾಷೆಯಲ್ಲಿ ಬರೆಯುತ್ತಿದ್ದೇನೆ ( ಪ್ರಯತ್ನಿಸುತ್ತಿದ್ದೇನೆ ಎಂಬುದೇ ಸರಿ !!) ಅಂದರೆ ನನಗೆ ( ನಾನೆ !!) ಶಹಬ್ಬಾಸ್ ಹೇಳಲೇಬೇಕು !! ನಮ್ಮೂರಿನ ಹಿರಿಯರೊಬ್ಬರು ಬಹಳ ದಿನಗಳ ನಂತರ ಕಂಡಾಗ ನನ್ನನ್ನು ಮಾತಿಗೆಳೆದದ್ದು ಹೀಗೆ .) ಹ್ವಾಯ್ ಹೇಂಗಿದ್ರಿ ? ಎಂಥ ಕಾಂಬುಕಿಲ್ಲೆ ?...... ಅಮ್ಮನ್ ಮನೀಗ್ ಹೋಯಿರ್ಯಾ ?... ಇಲ್ಯಾ ? ಮತ್ತೆ ?.... ಹೌದಾ . ಮಕ್ಕಳ ಎಂಥ ಮಾಡ್ತೊ ? ಹಿರಿಯಂವ ಶಾಲೆಗ್ ಹೋತ್ನಲ್ದ ? ಕಿರ್ದ್ ? ಎರಡ್ ವರ್ಶ ಆಯ್ತಾ ?..... ಮಸ್ತ್ ಮಾತಾಡ್ತ್ಲ್ ಅಂಬ್ರಲಾ ?.... ದೊಡ್ ಮಗ ಈಗ ಹುಷಾರಾಗಿದ್ನಾ ? ಸಣ್ಕಿಪ್ಪತ್ತಿಗೆ ಅಂವಂಗೆ ಹುಷಾರಿರ್ತೇ ಇರ್ಲಿಲ್ಲಲ್ಲಾ . ಈಗ ಅಡ್ಡಿ ಇಲ್ಯಾ ?....... ಈಗ ಅದೆಂಥದೊ ಹಂದಿಜ್ವರ ಅಂಬ್ರಲಾ ! ಎಲ್ಲ ಕಡಿಗೂ ಇತ್ತಂಬ್ರಲಾ ! ಎಶ್ಟ್ ಜನ ಸತ್ ಹೋಯಿರಂಬ್ರಲಾ ಅಲ್

ಅವಳ ಧ್ವನಿ

ಮಾನವ ಮೂಳೆ ಮಾಂಸದ ತಡಿಕೆ ಎಂದು ಹೇಳುವವರು ಹೇಳಲಿಲ್ಲವೇಕೆ ಅದರೊಲ್ಲೊಂದು ಮನಸುಂಟೆಂದು. ಅದನಾವರಿಸಿಹುದು ಸ್ವಾರ್ಥ ಮೋಹ ಮತ್ಸರಗಳೆಂಬ ಭಾವಗಳು ಅದು ಸೋಲುವುದು ಪ್ರೀತಿ ಸ್ನೇಹ ಆಸೆಗಳೆದಿರೆಂದು! ಅರಿವಿರಲಿ ಇನಿಯ ಇದಕೆ ನಾನು ಹೊರತಲ್ಲ ವೆಂದು ಬೇಡ ನನಗೆ ನೀ ನೀಡುವ ಎತ್ತರದ ಸ್ಥಾನ ಇರಬಯಸುವೆ ನಿನ್ನ ಪಕ್ಕದಲ್ಲಿಯೇ ಏಕೆಂದರೆ..... ದೇವತೆಯಲ್ಲ ನಾ ಬರಿ.... ಬರೀ ಮನುಷ್ಯಳು!

ಅಮ್ಮ

ಯಾವುದೋ ವಾತ್ಸಲ್ಯದ ಮಡಿಲಲ್ಲಿ ಹುಟ್ಟಿ ಬೆಳೆದು ಎಲ್ಲರನ್ನೂ ತೊರೆದು ಎಲ್ಲೋ ಬಂದು ಸೇರಿದಾಗ ಅಮ್ಮಾ ನೀ ಅರಿವಾದೆ ದುಗುಡ ನೋವುಗಳೆಲ್ಲ ಹೃದಯದೊಳು ಹೆಪ್ಪುಗಟ್ಟಿ ನಿಂತಾಗ ಆ ಮಮತೆಯ ಸ್ವರ ಕಿವಿಯ ತಲುಪಿದೊಡನೆ ಕರಗಿ ನೀರಾಗಿ ಹರಿವಾಗ ಅಮ್ಮಾ ನೀ ಅರಿವಾದೆ ಬರಿದಾದ ಮಡಿಲನ್ನು ಮುದ್ದಾದ ಪುಟ್ಟ ಜೀವವೊಂದು ತುಂಬಿ ಪ್ರಪಂಚವೇ ತಾನಾದಾಗ ಅಮ್ಮಾ ನೀ ಅರಿವಾದೆ ಕರುಳಕುಡಿ ಮಿಡಿ ಹಲ್ಲು ತೋರಿಸಿ ನಕ್ಕಾಗ ಜಗತ್ತನ್ನೇ ಗೆದ್ದ ಸಂಭ್ರಮದಿಂದ ಅದನ್ನು ಬಾಚಿ ತಬ್ಬುವಾಗ ಅಮ್ಮಾ ನೀ ಅರಿವಾದೆ ಸಹನೆಯೇ ಮೈವೆತ್ತಂತೆ ಎಲ್ಲವನ್ನು ನುಂಗಿಕೊಂಡು ಮೌನವಾಗಿ ಹರಿವ ಕಣ್ಣೀರನ್ನು ಪುಟಾಣಿ ಕೈಯೊಂದು ಅಕ್ಕರೆಯಿಂದ ಒರೆಸುವಾಗ ಅಮ್ಮಾ ನೀ ಅರಿವಾದೆ .

ಮಳೆಯೇ ಇಳಿಯೇ

ಒಮ್ಮೊಮ್ಮೆ ಸೋರು ಒಮ್ಮೊಮ್ಮೆ ತುಂತುರು ಒಮ್ಮೊಮ್ಮೆ ಹನಿ ಹನಿ ಒಮ್ಮೊಮ್ಮೆ ಜೋರು . ಬಾನಂಗಳದ ತುಂಬೆಲ್ಲ ಕಾರ್ಮುಗಿಲ ಹೊದಿಕೆ ನಡುನಡುವೆ ರವಿಗೆ ಇಣುಕುವಾ ಬಯಕೆ ಪಟ ಪಟ ಚಿಟ ಪಟ ಹನಿಗಳದೆ ಆಟ ಇಹವನ್ನೇ ಮರೆಸುವ ಈ ರಮ್ಯ ನೋಟ ನಡುನಡುವೆ ಗುಡುಗಿನ ಹದವಾದ ಮಿಳಿತ ನೋಡಿದಷ್ಟೂ ತಣಿಯದು ಹಿತವಾದ ಸೆಳೆತ ಅದರೊಂದಿಗೆ ಹೊಮ್ಮುವ ಕೋಲ್ಮಿಂಚಿನ ಹೊಳಪು ರಭಸದಲಿ ಸೀಳುತಿದೆ ಈ ಭೂಮಿಯ ಉಡುಪು ಅದ್ಯಾರ ವರವೋ ಈ ನಿನ್ನ ಚೆಲುವು ಅದೇಕೆ ನನಗೆ ನಿನ್ನಲ್ಲಿ ಒಲವು ಅದ್ಹೇಗೆ ನೀ ಮೆಲ್ಲನೆ ಮನವ ಆವರಿಸುವೆ ಅದೇಕೆ ನೆನಪುಗಳ ಸರಮಾಲೆ ತರುವೆ ನಮಗೋ ಭುವಿಯ ಮಸಿ ಮಾಡುವ ಚಪಲ ನಿನಗೋ ಧರೆಯ ತೊಳೆದಿಡುವ ತವಕ ನೀನಿಲ್ಲದೆ ಹಸಿರಿಲ್ಲ ನೀನಿಲ್ಲದೆ ಉಸಿರಿಲ್ಲ ನಿನ್ನಿಂದಲೇ ಚೆಲುವೆಲ್ಲ ನಿನ್ನಿಂದಲೇ ಜಗವೆಲ್ಲ .

ಏಕೆ ?

Image
ಮಂಜಿನರಮನೆಯ ಕಟ್ಟಿ ಅದರಂದ ಸವಿಯುವಾಗ ಸೂರ್ಯನೆದ್ದು ಬಂದನಲ್ಲ ! ಮಳೆ ನೀರ ಮೇಲೆ ಕಾಗದದ ದೋಣಿ ತೇಲಿಸುವಾಗ ನೀರೆ ಇಂಗಿ ಹೋಯಿತಲ್ಲ! ತೀರದ ಮರಳು ರಾಶಿಯಲಿ ಹೆಸರ ಕೊರೆದು ಬೀಗುವಾಗ ಸಾಗರದಲೆ ಚಿಮ್ಮಿ ಬಂದಿತಲ್ಲ! ಅಂಗೈಯಲ್ಲಿರುವ ಸ್ಫಟಿಕ ಸಿಕ್ಕಿತು ಎನ್ನುವಾಗ ಲೇ ಕೈಜಾರಿ ಹೋಯಿತಲ್ಲ !

ನಾನು

ಒಮ್ಮೊಮ್ಮೆ ನನಗೆ ಎಲ್ಲ ಯೋಚನೆಗಳು ಒಟ್ಟಿಗೆ ದಾಳಿ ಮಾಡುತ್ತವೆ. ಆಗ ನಾನು ನಾನಾಗಿರುವುದಿಲ್ಲ. ಎಲ್ಲೆಲ್ಲೊ ವಿಹರಿಸ್ತಾ ಇರ್ತೀನಿ. ಒಮ್ಮೆ ಕಲ್ಪನಾ ಲೋಕಕ್ಕೆ ಬಂದಿಳಿದರೆ ಅಲ್ಲಿಯೇ ಒಂದು ಸಾಮ್ರಾಜ್ಯವನ್ನೇ ಕಟ್ಟಿ ಬಿಡುತ್ತೇನೆ. ಚಿಕ್ಕವಳಿರುವಾಗ ಅಪ್ಪ ಹೇಳುತ್ತಿದ್ದ fantacy ಕಥೆಗಳನ್ನು ಕೇಳಿ ಕೇಳಿ ಕಲ್ಪನಾ ಸಾಮ್ರಾಜ್ಯವನ್ನು ಹೇಗೆ ಆಳುವುದು ಹಾಗು ಹೇಗೆ ವಿಸ್ತರಿಸುವುದು ಎಂಬುದನ್ನೂ ಕಲಿತುಕೊಂಡು ಬಿಟ್ಟಿದ್ದೀನಿ.ಹೀಗೆ ಯೋಚನೆಗಳು ಸಾಗಿ ಸಾಗಿ ಅಲ್ಲಿಯೇ ಒಂದು ಆಶಾಗೋಪುರ ಕಟ್ಟಿ ಅದರ ಮೇಲೇರಿ ಏರಿ ಏರಿ ಸಾಗುತ್ತಿರುವಾಗ ಸತ್ಯವೆಂಬುದು ಧುತ್ತೆಂದು ಕಣ್ಣ ಮುಂದೆ ಪ್ರತ್ಯಕ್ಷವಾಗಿ 'ನನ್ನನ್ನು ಒಪ್ಪಿಕೊ' ಎಂದು ಗೇಲಿ ಮಾಡಿ ನಕ್ಕಾಗ ಎಲ್ಲಿ ನಿಂತಿದ್ದೆನೋ ಅಲ್ಲಿಂದಲೇ ಧೊಪ್ಪೆಂದು ಕೆಳಗೆ ಬಿದ್ದು........ವಾಸ್ತವಕ್ಕೆ ಹೊಂದಿಕೊಳ್ಳಲೇ ಕಷ್ಟವಾಗಿ ಬಿಡತ್ತೆ. ಒಮ್ಮೊಮ್ಮೆ ಅನಿಸುವುದುಂಟು ನಾನು ಚಿಂತೆ ಎಂಬುದಕ್ಕೆ 'ವಿಚಾರ'ಎಂಬ ದೊಡ್ಡ ಹೆಸರು ಇಟ್ಟುಬಿಟ್ಟಿದ್ದಿನಿ ಅಂತ.ಈ ಭಾವನಜೀವಿಗಳ ಹಣೆಬರಹವೇ ಇಷ್ಟು ಅಂತ ಕಾಣುತ್ತೆ. ಭಾವನೆಗಳೇ ನಮ್ಮನ್ನು ಆಳುತ್ತವೆ. ಎಲ್ಲರ ಜೀವನದಲ್ಲೂ ಏಳು,ಬೀಳು,ಕಷ್ಟ ಸುಖ ಎಲ್ಲವೂ ಇದ್ದರೂ ಅದು ನಮ್ಮ ಸ್ವಂತ ಅನುಭವಕ್ಕೆ ಬಂದಾಗ ಅದು ಹೊಸದೇ. ಆಸೆಗಳಿಗೆ ಮಿತಿ ಇಲ್ಲ, ನಿರಾಶೆಗಳೂ ಕಡಿಮೆ ಇಲ್ಲ.

ಪಮ್ಮಿಗೊಂದು ಪತ್ರ

ಹಾಯ್ ಪಮ್ಮಿ, ನೋಡು, ಬ್ಲಾಗ್ನಲ್ಲಿ ನಿಂಗೆ ಪತ್ರ ಬರಿತ ಇದೀನಿ. ಕಾರ್ಡಿನಿಂದ ಶುರು ಆಗಿ ಈಗ ಬ್ಲಾಗಿಗೆ ಬಂದಿದೆ. ಅಷ್ಟರವರೆಗೂ ಉಳಿಸಿಕೊಂಡು ಬಂದಿದಿವಲ್ಲ ಸದ್ಯ . ಮೊನ್ನೆ ನಿನ್ನ ಮನೆಗೆ ಬಂದಾಗ ಯಾಕೋ ಮನಸ್ಸು ಸರಿ ಇರಲಿಲ್ಲ. ಗೊತ್ತಲ್ಲ ನಿಂಗೆ. ಆದ್ರೆ ನಿನ್ ಜೊತೆ ಮಲ್ಪೆ ಬೀಚಿಗೆ ಹೋಗಿ ಬಂದ್ಮೇಲೆ ಒಂದ್ ಸರ್ತಿ ಫ್ರೆಶ್ ಆಯ್ತು ನೋಡು. ಅದರಲ್ಲೂ ಗಾಡಿಯಲ್ಲಿ ಹೋಗಿದ್ದು ಮತ್ತು ಮಜಾ ಬಂತು. ಸದ್ಯ ನನ್ನನ್ನು ಸೇಫಾಗಿ ಕರ್ಕೊಂಡು ಬಂದ್ಯಲ್ಲ !! ಒಂದ್ ಮಾತಂತೂ ಹೇಳ್ಬೇಕು. ನಿಂದು ಭಾವಂದು ಜೋಡಿ "ಮೇಡ್ ಫಾರ್ ಈಚ್ ಅದರ್ " .ಎಷ್ಟು ಖುಷಿಯಾಯ್ತು ಗೊತ್ತ ನಂಗೆ ನಿಮ್ಮಿಬ್ರನ್ನು ನೋಡಿ. ಇಷ್ಟು ದಿನ ನಾನು ಸರಿಯಾಗಿ ಅಬ್ಸರ್ವ್ ಮಾಡಿರಲಿಲ್ಲ. ಸಂಬಂಧದಲೆಲ್ಲು ಕೃತಕತೆಯ ಲೇಪವಿಲ್ಲ, ಅತಿಯಾದ ನಿರೀಕ್ಷೆಗಳು ಇಲ್ಲ, ಅಹಂನ ದೊಂಬರಾಟವಿಲ್ಲ.. ಹಹ.. ನಂಗೊತ್ತು ನಿನೆಂತಿಯ ಅಂತ. ಇನ್ನು ಜಾಸ್ತಿ ಕೊರೆಯೋಲ್ಲ ಬಿಡು.... ಮೊದಲು ಬರೆಯುತಿದ್ದ ಹಾಗೆ ಬರೀಬೇಕು ಅಂದ್ರೆ, ಪವನ ಕೊಡಿಸಿದ ಚುಡಿ ಹೊಲೆಯೋಕೆ ಕೊಟ್ರು ಇನ್ನು ಸಿಕ್ಕಿಲ್ಲ, ನಮ್ಮ ಬೆಳಗಾಂ ಪ್ರೊಗ್ರಾಮ್ ಕ್ಯಾನ್ಸಲ್ ಆಯ್ತು, ೫ ನೆ ತಾರೀಕು ಕರಣ್ ನಿಗೆ ಶಾಲೆ ಶುರು, ಅತ್ತೆಗೆ ಕಾಲು ನೋವು ಜಾಸ್ತಿ ಆಗಿದೆ, ಮಾವನಿಗೆ ಬೆನ್ನು ನೋವು ಹೆಚ್ಚಾಗಿದೆ, ನಂಗೆ ಕೆಮ್ಮು ಸ್ವಲ್ಪ ಕಮ್ಮಿಯಾಗಿದೆ... ಒಳ್ಳೆ ಡಾಕ್ಟರ ಪ್ರಿಸ್ಸಿಪ್ಶನ್ ಇದ್ದ ಹಾಗೆ ಇದ್ಯಲ್ಲ !!

ಆ ದಿನಗಳು

ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ ಬರಿ ಮಾತು ಬರಿ ಮಾತು ಇನ್ಯಾಕೆ ಪ್ರೀತಿಯಲಿ ನೋಟವೊಂದೆ ಸಾಕು ದಿನವು ಬೆರೆಯಲೇ ಬೇಕು ಪ್ರೇಮಲೋಕದಾ ಗೀತೆ ಬರೆಯೋಣ ಬಾ ss [ಪ] ಬಾನಾಡಿ ಗೊಂದು ಸವಿಮಾತು ಕಲಿಸುವ ಆ ವೀಣೆಗೊಂದು ಎದೆರಾಗ ತಿಳಿಸುವ ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವಾ ಅರಳುತಿರೋ ಹೂಗಳಿಗೆ ಒಲವ ಸುಧೆ ಯಾ ಕೊಡುವ ಆವಾಗ ಬಾಳಿನಾ s ಅರ್ಥವೇ s ಪ್ರೇಮವೆಂಬುದಲವೆ s ಪ್ರೇಮವೇ ಇಲ್ಲದೆ ನಾನು ನೀನು ಯಾಕೆ ss [ ೧ ] <-following stanza composed by rohini -> ಆ ಮೋಡದಿಂದ ಮಳೆಹನಿಯು ಜಿನುಗುತಾ ಈ ಭೂಮಿಯಿಂದ ಅನುರಾಗ ಅರಳುತ ತಾರೆಯದು ಇಳಿಯುತಲಿ ಪ್ರೇಮವೆಂಬ ಕಿರಣ ಪಸರಿಸಿದೆ ಹೊಮ್ಮಿಸಿದೆ ಪ್ರೀತಿಯೆಂಬ ಕವನ ಆಕಾಶದಾಚೆಯಾ s ಲೋಕಕೇ s ಹಾರಿ ಹಾರಿ ಭ್ರಮಣ ಬಲ್ಲೆನು s ಅಲ್ಲಿಯೇ s ನನ್ನ ನಿನ್ನ ಮಿಲನಾ ss [ ೨ ]

ಮಂಥನ

ಅಂತು ಪವನನ ನಿಶ್ಚಿತಾರ್ಥ ಆಯಿತು. ಆದರು ಯಾಕೋ ಸಂತೋಷ ಅಂತ ಆಗ್ತಾ ಇಲ್ಲ. ಹುಡುಗಿ ನೋಡಿಕೊಂಡು ಬಂದ ದಿನವೇ ಪವನ ನನ್ನನ್ನು ಕೇಳಿದಾಗ ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಮನ ಗೊಂದಲದ ಗೂಡಾಗಿತ್ತು. ನನ್ನಿಂದ ಏನು ಉತ್ತರ ಬರದಾಗ ಅಮ್ಮನನ್ನು ಕೇಳಿದ. ಅವರು ಏನೋ ಹೇಳಿದರು, ಕಡೆಗೆ ತನ್ನ ನಿರ್ಧಾರ ಸಾರಿಬಿಟ್ಟ. ತಾನು ಅದೇ ಹುಡುಗಿಯನ್ನ ಮದ್ವೆ ಆಗ್ತೀನಿ ಅಂತ. ಕಡೆಗೆ ಅನ್ನಿಸಿತು ಹೌದು ಅ ಹುಡುಗಿ ಚೆನ್ನಾಗೆ ಇದ್ದಾಳಲ್ಲ,ಬೇಡ ಅನ್ನಲು ಯಾವ ಕಾರಣವೂ ಇರಲ್ಲಿಲ್ಲ. ನಾವೆಲ್ಲ ಸಮ್ಮತಿ ನೀಡಿದೆವು. ಮರುಕ್ಷಣವೇ ನನಗೇಕೋ ಬೇಜರಾಗಲು ಶುರುವಾಯ್ತು. ಪ್ರಸಾದ್ಗೆ ಹೇಳದೆ, 'ನಾನ್ಯಾಕೋ ಪವನನನ್ನು ಮಿಸ್ ಮಾಡಿಕೊಳ್ತಾ ಇದೀನಿ' ಅಂತ. ಅವರಂತೂ ನಕ್ಕುಬಿಟ್ಟರು,'ಯಾರತ್ರನಾದ್ರು ಹೀಗೆ ಹೇಳಿಬಿಟ್ಟೀಯಾ ಮತ್ತೆ, ತಮ್ಮನಿಗೆ ಮದ್ವೆ ಸೆಟ್ಟಾಯ್ತು ಅಂದ್ರೆ ಯಾರಾದ್ರೂ ಬೇಜಾರ್ ಮಡಿಕೊಳ್ತರಾ? ವಿಚಿತ್ರ ಮಾರಾಯ್ತಿ ' ಅಂತ.ನಂತರ ಏನೂ ಮಾತಾಡೋದಿಕ್ಕೆ ಹೋಗಲಿಲ್ಲ. ಅವರತ್ರ ಅಷ್ಟೆ ಅಲ್ಲ ಯಾರತ್ರನು. ನಾನೆಂದೂ ತಮ್ಮನಿಂದ ಏನೂ ನಿರೀಕ್ಷೆ ಮಾಡಲಿಲ್ಲ. ಕಷ್ಟ ,ಸುಖ ಹಂಚ್ಕೊಳ್ತಿದ್ದೆ ಅಷ್ಟೆ. ನನಗ್ಗೊತ್ತು, ಅವನಿಗೂ ಒಬ್ಬಳು ಆತ್ಮೀಯಳು ಬೇಕು, ಜೀವನ ಸಂಗಾತಿ ಬೇಕು ಅಂತ. ಈ ವಿವೇಚನೆ ಮೀರಿ ನಂಗೆ ಈ ತರಹ ಯೋಚಿಸೋದನ್ನ ತಡೆಯೋಕಗ್ತಿಲ್ಲ. ನಾನು ಬಹುಶ ಒಂಭತ್ತೋ ಅಥವ ಹತ್ತನೇ ಕ್ಲಾಸಲ್ಲಿದ್ದಾಗ ,ಶ್ರಿಧರಣ್ಣ ನನ್ನ ಜಾತಕ ನೋಡಿ ಹೇಳಿದ್ದ

ಪಯಣ

ಜೀವನದ ಪಯಣದಿ ಸಾಗಿ ಸೋಲುತಿಹರೆಲ್ಲ ನಿಂತಲ್ಲೇ ನೆಲೆಯೂರುವಾಸೆ ಓ ಡುತಲೇ ಇದೆ ಕಾಲ. ಜಗವನೇ ಹಿಡಿದಿಡುವ ತವಕ ನಿಲ್ಲಲೊಲ್ಲದು ಸಮಯ ಯಾರ ಕೈಗೂ ನಿಲುಕದ ಈ ಕಾಲವೇ ವಿಸ್ಮಯ ಮನವೆಂಬ ಹುತ್ತದೊಳಗೆ ಹುಚ್ಚಾಸೆ ಗಳ ಮೊತ್ತ ಗುಣಿಸುತಲೇ ಹೋಗುವುದು ಅದೇನೋ ವಿಚಿತ್ರ ಕಾಲದೊಡನೆ ನಮ್ಮೆಲ್ಲರ ಗೆಲ್ಲಲಾಗದ ಓಟ ಜೀವವಿರುವವರೆಗೂ ಮುಗಿಯದು ಬದುಕಿನ ಜಂಜಾಟ ನಿತ್ಯ ಹೊಸಬೆಳಗು ನಿತ್ಯ ಹೊಸ ನಿರೀಕ್ಷೆ ನಿತ್ಯ ಹೊಂಗನಸುಗಳ ಸಾಕಾರದಾಪೇಕ್ಷೆ ಸಾಗರದಲೆಗಳಲಿ ಮಿಂದೆದ್ದು ಬಂದನಾ ಸೂರ್ಯ ಇದೋ ತಂದೆ ಹೊಸತೊಂದು ದಿನ ಹೊಸತೊಂದು ಪರ್ವ ಹಿಡಿಯಷ್ಟು ಜೀವನ ಅಂಗೈಲಿರುವಾಗ ಕ್ಷಣ ಕ್ಷಣ ಸವಿಯಲು ಆದಿಯೆನ್ತು ಅಂತ್ಯ ವೆಂತು ಮುಗಿಯದಲ್ಲ ಈ ಪಯಣ .

ಸುಪುತ್ರನ ಅಣಿಮುತ್ತುಗಳು

Image
ನೀವೆಂದಾದರೂ ಕನಸಿನಲೋಕ ಕಂಡಿದ್ದಿರಾ?ನಾನು ಕಂಡಿದ್ದೀನಿ. ನಾನಷ್ಟೇ ಅಲ್ಲ ನೀವೂ ಕಂಡಿದ್ದಿರಾ, ಆಶ್ಚರ್ಯ ಆಯ್ತಾ? ಎಲ್ಲರ ಕನಸಿನ ಲೋಕದ ಹೆಸರು ಒಂದೇ, ಅದುವೇ ಬಾಲ್ಯ. ಏನು ಎತ್ತ ಅಂತ ಅರ್ಥ ಆಗೋದರೊಳಗೆ ಕಳೆದ್ಹೋಗಿ ಬಿಟ್ಟಿರುತ್ತೆ. ನನ್ನ ಬಾಲ್ಯವಂತೂ ಕಳೆದ್ಹೋಗಿ ಬಿಟ್ಟಿದೆ. ಈಗ ನನ್ನ ಮಕ್ಕಳು ಆ ಅಮೂಲ್ಯವಾದ ಬಾಲ್ಯವನ್ನು ಅನುಭವಿಸ್ತಾ ಇದಾರೆ. ಅವರ ಆಟಗಳನ್ನು ನೋಡುವುದೇ ಒಂದು ಸಂತೋಷ. ಬಾಲಭಾಷೆ ಕೇಳುವುದಕ್ಕೆ ಚಂದ.ಅವರ ಮುಗ್ದ ಮಾತುಗಳನ್ನು ಬರವಣಿಗೆಯಲ್ಲಿ ರೆಕಾರ್ಡ್ ಮಾಡಿ ಇಡಬೇಕೆಂದು ಹೊರಟಿದ್ದೇನೆ. ಇದು ನನಗೋಸ್ಕರ ಅನ್ನುವದಕ್ಕಿಂತ ಅವರಿಗೋಸ್ಕರ ಬರೆಯುತ್ತಿದ್ದೇನೆ. so , dedicated to my beloved children karan and thanisha. ------------------------------------------------------------------------------------- ಕರಣ್: ಅಮ್ಮ ನಕ್ಷತ್ರಗಳೇಕೆ ಕೆಳಗೆ ಬಿಳುವುದಿಲ್ಲಮ್ಮ? ನಾನು(ಅಯ್ಯಬ್ಬ?) : ಅವೆಲ್ಲ ತುಂಬ ದೂರದಲ್ಲಿದೆ ಪುಟ್ಟ ಅವೆಲ್ಲ ಆಕಾಶದಲ್ಲಿ ಸುಮ್ಮನೆ ನಿಂತಿರ್ತಾವೆ . ಕರಣ್: ? ನಾನು: ಅವನ್ನೆಲ್ಲ ಫೆವಿಕಾಲ್ ಹಾಕಿ ಅಂಟಿಸಿರ್ತಾರೆ. ಕರಣ್ : ಯಾರು? ನಾನು: ದೇವರು. ಕರಣ್: ಹೌದಾ? ನಾನು:ಹೌದು.(ಸದ್ಯ ತೃಪ್ತಿ ಆಯ್ತಲ್ಲ!) ---------------------------------------------------------------------------------------- ಕರಣ್ :ಮಣ್ಣಿನಡಿ ಏನಿರುತ್ತೆ? ನಾನು: ಕಲ್ಲಿರುತ್ತೆ. ಕರಣ್:

ಎಪಿಸೋಡ್ 2

ಪ್ಲೀಸ್ ಬೈಬೇಡಿ, ನಾನೇನು ಹಿಂದಿ ಸಿರಿಯಲ್ ತರಹ ಎಳೆಯೋಲ್ಲ. ಈ ಪಾಯಿಂಟ್ ಮೊನ್ನೆಯಷ್ಟೇ ಫ್ಲಾಶ್ ಆಯ್ತು. ಬರೀಲೇಬೇಕು ಅನ್ನಿಸ್ತ ಇದೆ.ಅದೇನೆಂದರೆ ಈ ಪ್ರೀತಿ ಅನ್ನೋಳಿಗೆ ಅಲ್ಲಲ್ಲ !! ಈ ಪ್ರೀತಿ ಅನ್ನೋದಿಕ್ಕೆ ಸ್ಕಿಜೋಫ್ರೀನಿಯ ಕಾಯಿಲೆಯಂತೆ! ಹ್ಞಾ! ಅದ್ಕೆ ಇರ್ಬೇಕು ಪ್ರೀತಿಯನ್ನು ತಲೇಲಿ ತುಂಬ್ಕೊಂಡವನಿಗೆ ಏನು ತಿಂದೆ, ಏನು ಕುಡಿದೆ ಅನ್ನೋದು ನೆನಪಿರೋಲ್ಲ ಯಾರನ್ನು ನೋಡಿದೆ ,ಯಾರನ್ನು ಬಿಟ್ಟೆ ಅಂತ ಗೊತ್ತಾಗೊಲ್ಲ, ಯಾರು ಏನು ಹೇಳಿದರೂ ತಲೆಯೊಳಗೆ ಇಳಿಯುವುದೇ ಇಲ್ಲ! ನೋಡಿ ಎಂತ ಪರಿಸ್ಥಿತಿ? ಬೇಕಾ ಇದು?! ಆದ್ರೆ ಪ್ರೀತಿ ಅನ್ನೋದೇನ್ ಹೇಳಿ ಕೇಳಿ ಬರುತ್ತಾ ? ವೈರಲ್ ಇನ್ಫೆಕ್ಷನ್ ತರ ಬಂದು ಮೆದುಳಲ್ಲಿ ವಕ್ರಯಿಸಿಕೊಂಡ ಮೇಲೆ ಗೊತ್ತಾಗೋದು. ಅದರ ಹಿಡಿತ ಅಂದ್ರೆ ಉಡದ ಹಿಡಿತ. ಈ ಪ್ರೇಮದ ಟಾರ್ಗೆಟ್ ಯಾವುದು ಗೊತ್ತ? ನಂ ಎದೆ ಗೂಡಲ್ಲಿ ಬೆಚ್ಚಗೆ ಕುಳಿತು ಮಿಡಿತಾ ಇರೋ ಹೃದಯ. ಪ್ರೀತಿ ಅಮರಿಕೊಂಡ ಕೂಡಲೆ ಹಾರ್ಟ್ಗೆ ವರ್ಕ್ ಲೋಡ್ ಜಾಸ್ತಿ ಆಗುತ್ತೆ. ಪ್ರೀತಿಸೋ ವ್ಯಕ್ತಿ ಎದುರು ಸಿಕ್ಕರೆ,ಫೋನಿನಲ್ಲಿ ಮಾತಾಡಿದ್ರೆ , ಇದೇನೂ ಬೇಡ ಬರೀ ನೆನಪು ಬಂದ್ರೆ ಹೃದಯ ಸಿಕ್ಕಾಪಟ್ಟೆ ಹೊಡೆದುಕೊಳ್ಳಲು ಶುರು ಆಗುತ್ತೆ. ಅದೇ ಪ್ರೀತಿಸೋ ವ್ಯಕ್ತಿ ದಕ್ಕದೇ ಹೋದರಂತೂ ತಿರುಚಿ ತಿರುಚಿ ಇಡುತ್ತಲ್ರೀ ಈ ಹಾರ್ಟು ಆ ಸಂಕಟ ಅನುಭವಿಸಿದೊರ್ಗೆ ಗೊತ್ತು. ಥೂ ! ಈ ಹಾಳು ಪ್ರೀತಿ ಅನ್ನೋದು ಯಾಕಾದ್ರೂ ಇದೆಯೋ?!